ಚತ್ತೀಸ್ಗಢ: ಎನ್ಕೌಂಟರ್ ನಲ್ಲಿ ನಕ್ಸಲ್ ಮಹಿಳೆ ಸಾವು
ರಾಯ್ಪುರ, ಜು. 9: ಚತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆ ಮಂಗಳವಾರ ಬೆಳಗ್ಗೆ ನಡೆಸಿದ ಎನ್ಕೌಂಟರ್ನಲ್ಲಿ ನಕ್ಸಲ್ ಮಹಿಳೆಯೋರ್ವಳು ಮೃತಪಟ್ಟಿದ್ದಾಳೆ. ಭದ್ರತಾ ಪಡೆಯ ಸಂಯುಕ್ತ ತಂಡ ಡಬ್ಬಕೊಂಟ ಗ್ರಾಮದ ಸಮೀಪದ ಅರಣ್ಯದಲ್ಲಿ ಬೆಳಗ್ಗೆ 6 ಗಂಟೆಗೆ ನಡೆಸಿದ ನಕ್ಸಲ್ ನಿಗ್ರಹ ಕಾರ್ಯಾಚರಣೆಯ ಸಂದರ್ಭ ಗುಂಡಿನ ಚಕಮಕಿ ನಡೆಯಿತು ಎಂದು ಡಿಐಜಿಪಿ (ನಕ್ಸಲ್ ನಿಗ್ರಹ ಕಾರ್ಯಾಚರಣೆ) ಸುಂದರರಾಜ್ ಪಿ. ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಕಮಾಂಡೊ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆ್ಯಕ್ಷನ್ (ಕೋಬ್ರಾ), ವಿಶೇಷ ಕಾರ್ಯ ಪಡೆ ಹಾಗೂ ಜಿಲ್ಲಾ ರಿಸರ್ವ್ ಗಾರ್ಡ್ಗೆ ಸೇರಿದ ಸಿಬ್ಬಂದಿ ಪಾಲ್ಗೊಂಡರು.
ಶೋಧ ಕಾರ್ಯಾಚರಣೆ ಸಂದರ್ಭ ನಕ್ಸಲೀಯರು ಹಾಗೂ ಯೋಧರ ನಡುವೆ ಗುಂಡಿನ ಚಕಮಕಿ ನಡೆಯಿತು. ನಕ್ಸಲೀಯರು ಅರಣ್ಯದೊಳಗೆ ಪರಾರಿಯಾದರು ಎಂದು ಅವರು ತಿಳಿಸಿದ್ದಾರೆ.
ಎನ್ಕೌಂಟರ್ ನಡೆದ ಸ್ಥಳದಲ್ಲಿ ನಕ್ಸಲ್ ಸಮವಸ್ತ್ರ ಧರಿಸಿದ್ದ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಆಕೆಯ ಸಮೀಪ ಒಂದು ರೈಫಲ್ ಕೂಡ ಕಂಡು ಬಂದಿದೆ. ಮೃತಪಟ್ಟ ಮಹಿಳೆಯ ಗುರುತನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ರಕ್ತದ ಕಲೆಗಳು ಕಂಡು ಬಂದಿವೆ. ಗುಂಡಿನ ಚಕಮಕಿಯಲ್ಲಿ ಕೆಲವು ನಕ್ಸಲೀಯರು ಗಾಯಗೊಂಡಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.