ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಕಷ್ಟ: ನಿತಿನ್ ಗಡ್ಕರಿ
ಹೊಸದಿಲ್ಲಿ: ಭಾರತದ ಆರ್ಥಿಕತೆಯನ್ನು 2024ರ ಒಳಗಾಗಿ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಅಭಿವೃದ್ಧಿಪಡಿಸುವ ಗುರಿ ಸಾಧನೆ ಕಷ್ಟ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಒಪ್ಪಿಕೊಂಡಿದ್ದಾರೆ.
ಆದರೆ ಅದು ಅಸಾಧ್ಯವಲ್ಲ; ದೇಶೀಯ ಉತ್ಪಾದನೆ ಹೆಚ್ಚಿಸುವ ಮೂಲಕ ಮತ್ತು ಆಮದು ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುವ ಮೂಲಕ ಇದನ್ನು ಸಾಧಿಸಬಹುದಾಗಿದೆ ಎಂದು 29ನೇ ಅಂತರ್ ರಾಷ್ಟ್ರೀಯ ವ್ಯವಸ್ಥಾಪನಾ ಸಮಾವೇಶದಲ್ಲಿ ಮಾತನಾಡಿದ ಅವರು ಅಭಿಪ್ರಾಯಪಟ್ಟರು.
2024ರ ಒಳಗಾಗಿ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್ ಆರ್ಥಿಕತೆಯಾಗಿ ಪರಿವರ್ತಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಬಿಜೆಪಿ ಮುಖಂಡರು ಹೇಳಿಕೆ ನೀಡುತ್ತಿದ್ದಾರೆ. "ಯಾವುದೇ ಗುರಿ ಸಾಧನೆಗೆ ಪ್ರಬಲವಾದ ರಾಜಕೀಯ ಇಚ್ಛಾಶಕ್ತಿ ಬೇಕು. ಅದಕ್ಕೆ ಸೂಕ್ತ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿಯವರು ದೇಶದ ಆರ್ಥಿಕತೆಯನ್ನು 5 ಟ್ರಿಲಿಯನ್ ಆರ್ಥಿಕತೆಯಾಗಿ ಬೆಳೆಸುವ ಗುರಿಯನ್ನು ನಿಗದಿಪಡಿಸಿದ್ದಾರೆ. ಇದು ಕಷ್ಟಕರ; ಆದರೆ ಅಸಾಧ್ಯವಲ್ಲ" ಎಂದು ಗಡ್ಕರಿ ವಿವರಿಸಿದರು.
"ನಮ್ಮ ದೇಶದಲ್ಲಿ ವಿಪುಲವದ ಸಂಪನ್ಮೂಲಗಳಿವೆ ಮತ್ತು ಉತ್ಪಾದನಾ ಸಾಮರ್ಥ್ಯವೂ ಇದೆ. ಆದಾಗ್ಯೂ ಪ್ರತಿ ವರ್ಷ ನಾವು ಔಷಧಿ, ವೈದ್ಯಕೀಯ ಸಾಧನಗಳು, ಕಲ್ಲಿದ್ದಲು, ತಾಮ್ರ, ಕಾಗದ ಮತ್ತಿತರ ವಸ್ತುಗಳ ಆಮದಿಗಾಗಿ ಕೋಟ್ಯಂತ ರೂ.ಗಳನ್ನು ವೆಚ್ಚ ಮಾಡುತ್ತಿದ್ದೇವೆ" ಎಂದರು. "ನಾವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಬೆಳೆಯಬೇಕಾದರೆ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಬದಲು ದೇಶೀಯ ಉತ್ಪಾದನೆಯನ್ನು ಹೆಚ್ಚಿಸಬೇಕು" ಎಂದು ಅಭಿಪ್ರಾಯಪಟ್ಟರು.