ಮುಂದಿನ ಚುನಾವಣೆಯಲ್ಲಿ ಎಸ್ಪಿ 350 ಸ್ಥಾನಗಳನ್ನು ಗೆಲ್ಲುವುದಾಗಿ ಜ್ಯೋತಿಷಿ ಹೇಳಿದ್ದಾರೆ: ಅಖಿಲೇಶ್ ಯಾದವ್
ಲಕ್ನೋ,ಮಾ.15: ಉತ್ತರ ಪ್ರದೇಶ ವಿಧಾನಸಭೆಗೆ 2022ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ತನ್ನ ಪಕ್ಷವು 403 ಸ್ಥಾನಗಳ ಪೈಕಿ 350 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹಸ್ತ ಸಾಮುದ್ರಿಕ ಜ್ಯೋತಿಷಿಯೋರ್ವರು ತನಗೆ ತಿಳಿಸಿದ್ದಾರೆ ಎಂದು ರವಿವಾರ ಇಲ್ಲಿ ಹೇಳಿದ ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರು, ಅಧಿಕಾರಕ್ಕೆ ಬಂದರೆ ತನ್ನ ಪಕ್ಷವು ಜಾತಿವಾರು ಜನಗಣತಿಯನ್ನು ನಡೆಸಲಿದೆ ಎಂದು ಹೇಳಿದರು.
ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು,‘ನಾನು ಇತ್ತೀಚಿಗೆ ದಿಲ್ಲಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ವ್ಯಕ್ತಿಯೋರ್ವರು ನನ್ನ ಅಂಗೈಗಳನ್ನು ನೋಡಿ ಕಠಿಣವಾಗಿ ಶ್ರಮಿಸಿದರೆ 350 ಸ್ಥಾನಗಳನ್ನು ಗೆಲ್ಲುವ ಮೂಲಕ ನಾನು ಸರಕಾರವನ್ನು ರಚಿಸಲಿದ್ದೇನೆ’ ಎಂದು ತಿಳಿಸಿದ್ದಾರೆ ಎಂದರು.
350ಕ್ಕಿಂತ ಒಂದು ಹೆಚ್ಚು,ಅಂದರೆ ಒಟ್ಟು 351 ಸ್ಥಾನಗಳನ್ನು ಗೆಲ್ಲಲು ತಾನು ನಿರ್ಧರಿಸಿದ್ದೇನೆ ಎಂದೂ ಅವರು ಹೇಳಿದರು.
ಆಡಳಿತ ಬಿಜೆಪಿ ವಿರುದ್ಧ ದಾಳಿ ನಡೆಸಿದ ಯಾದವ,ಅದು ಸುಳ್ಳುಗಳನ್ನು ಹರಡುವ ಮೂಲಕ ರಾಜ್ಯದಲ್ಲಿ 300 ಸ್ಥಾನಗಳನ್ನು ಗೆಲ್ಲಬಹುದಾದರೆ ಎಸ್ಪಿ ಪ್ರಾಮಾಣಿಕತೆ ಯಿಂದ ಕೆಲಸ ಮಾಡುವ ಮೂಲಕ 351 ಸ್ಥಾನಗಳನ್ನು ಗಳಿಸುತ್ತದೆ. ಪಕ್ಷವು ಖಂಡಿತ ಇದನ್ನು ಸಾಧಿಸಲಿದೆ ಎಂದರು.