ಅಪ್ರಾಪ್ತ ವಯಸ್ಸಿನ ಯುವತಿಯ ಅತ್ಯಾಚಾರ ಪ್ರಕರಣ: ಆರೋಪಿಯ ಬಂಧನ
ಲಕ್ನೊ, ಅ.19: ಬಿಜೆಪಿಯ ಗೋರಕ್ಷಕ್ ಸಮಿತಿಯ ಸ್ಟಿಕರ್ ಅಂಟಿಸಿದ್ದ ಕಾರೊಂದರಲ್ಲಿ ರವಿವಾರ 15 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಆರೋಪಿಯನ್ನು 20 ವರ್ಷದ ಪುಲ್ಕಿತ್ ಸೈನಿ ಎಂದು ಗುರುತಿಸಲಾಗಿದೆ. ಆದರೆ ಆರೋಪಿಗೂ ತಮಗೂ ಯಾವುದೇ ಸಂಬಂಧವಿಲ್ಲ. ಆತ ಗೋರಕ್ಷಕ್ ಸಮಿತಿಯ ಸ್ಟಿಕರ್ ಅನ್ನು ಅಕ್ರಮವಾಗಿ ತನ್ನ ಕಾರಿನಲ್ಲಿ ಅಂಟಿಸಿದ್ದಾನೆ ಎಂದು ಬಿಜೆಪಿಯ ಮೀರತ್ ಘಟಕಾಧ್ಯಕ್ಷ ಮುಕೇಶ್ ಸಿಂಘಾಲ್ ಪ್ರತಿಕ್ರಿಯಿಸಿದ್ದಾರೆ.
ಯುವತಿ ಮತ್ತು ಆರೋಪಿ ಸೈನಿ ಇಬ್ಬರೂ ಸ್ಥಳೀಯ ಕಾಲೇಜಿನ ಕ್ರೀಡಾಂಗಣದಲ್ಲಿ ಜೂಡೊ ಅಭ್ಯಾಸ ನಡೆಸುತ್ತಿದ್ದರು. ಅಕ್ಟೋಬರ್ 16ರಂದು ಅಭ್ಯಾಸ ಮುಗಿಸಿ ಯುವತಿ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಆಕೆಯನ್ನು ತಡೆದಿದ್ದ ಆರೋಪಿ, ಕಾರಿನಲ್ಲಿ ಮನೆಗೆ ಬಿಡುವುದಾಗಿ ಆಕೆಯ ಮನವೊಲಿಸಿದ್ದಾನೆ. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಮರುದಿನ ಆಕೆಯ ಆರೋಗ್ಯದಲ್ಲಿ ಏರುಪೇರಾದಾಗ ಘಟನೆಯ ಬಗ್ಗೆ ಯುವತಿ ಹೆತ್ತವರಿಗೆ ತಿಳಿಸಿದ್ದು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಅತ್ಯಾಚಾರ ಪ್ರಕರಣ ದಾಖಲಿಸಿದ್ದು ಆರೋಪಿಯನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.