ಲಾಕ್ಡೌನ್ ಸಡಿಲ ಬಳಿಕ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಹೆಚ್ಚಳ
ಹೊಸದಿಲ್ಲಿ, ಡಿ.1: ಸಂಪೂರ್ಣ ಲಾಕ್ಡೌನ್ ಅವಧಿಯಲ್ಲಿ ಅಂದರೆ ಮಾರ್ಚ್ 24ರಿಂದ ಮೇ 31ರವರೆಗೆ ರಸ್ತೆ ಅಪಘಾತ ಹಾಗೂ ಸಾವಿನ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬಂದಿತ್ತು. ಆದರೆ ಲಾಕ್ಡೌನ್ ಸಡಿಲವಾದ ಬಳಿಕ ಜುಲೈ- ಸೆಪ್ಟಂಬರ್ ತ್ರೈಮಾಸಿಕದಲ್ಲಿ ರಸ್ತೆ ಅಪಘಾತದಿಂದ ಮೃತಪಟ್ಟವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ.
ರಸ್ತೆ ಸುರಕ್ಷೆ ಬಗ್ಗೆ ರಾಜ್ಯ ಸರಕಾರಗಳು ಸುಪ್ರೀಂಕೋರ್ಟ್ಗೆ ಸಲ್ಲಿಸಿದ ಅಂಕಿಅಂಶಗಳಿಂದ ಈ ಅಂಶ ತಿಳಿದುಬಂದಿದೆ. ಈ ತ್ರೈಮಾಸಿಕ ಅವಧಿಯಲ್ಲಿ 33,281 ಮಂದಿ ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿ ಸಂಭವಿಸಿದ ಸಾವಿಗೆ ಹೋಲಿಸಿದರೆ ಶೇಕಡ 4.3ರಷ್ಟು ಕಡಿಮೆ.
ಆದಾಗ್ಯೂ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ ಸೆಪ್ಟಂಬರ್ ವರೆಗೆ ರಸ್ತೆ ಅಪಘಾತಗಳಲ್ಲಿ ಸಂಭವಿಸಿದ ಸಾವು ಶೇಕಡ 22ರಷ್ಟು ಕಡಿಮೆ. ಈ ವರ್ಷ ರಸ್ತೆ ಅಪಘಾತಗಳಲ್ಲಿ ಮೃತಪಟ್ಟವರ ಸಂಖ್ಯೆ ಕಳೆದ ವರ್ಷಕ್ಕಿಂತ 24,900ರಷ್ಟು ಕಡಿಮೆ. ಸಂಪೂರ್ಣ ಲಾಕ್ಡೌನ್ ಅವಧಿಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಿದ ಹಿನ್ನೆಲೆಯಲ್ಲಿ ಅಪಘಾತ ಹಾಗೂ ಸಾವಿನ ಸಂಖ್ಯೆ ಕೂಡಾ ಕಡಿಮೆಯಾಗಿದೆ. ಲಾಕ್ಡೌನ್ ಅವಧಿಯಲ್ಲಿ ರಸ್ತೆ ಅಪಘಾತ ಸಾವು ಶೇಕಡ 62ರಷ್ಟು ಕಡಿಮೆಯಾಗಿತ್ತು.
ರಾಜ್ಯಗಳು ನೀಡಿದ ಅಂಕಿಅಂಶಗಳ ಪ್ರಕಾರ 2019ರ ಜನವರಿಯಿಂದ ಸೆಪ್ಟಂಬರ್ ಅವಧಿಯಲ್ಲಿ ರಸ್ತೆ ಅಪಘಾತಗಳಿಗೆ 1.14 ಲಕ್ಷ ಮಂದಿ ಬಲಿಯಾಗಿದ್ದರು. ಆದರೆ 2020ರ ಜನವರಿಯಿಂದ ಸೆಪ್ಟಂಬರ್ ಅವಧಿಯಲ್ಲಿ ಅಪಘಾತದಲ್ಲಿ ಬಲಿಯಾದವರ ಸಂಖ್ಯೆ 89,500. ಜುಲೈ- ಸೆಪ್ಟಂಬರ್ ಅವಧಿಯಲ್ಲಿ ಅಪಘಾತಗಳಲ್ಲಿ ಮೃತಪಟ್ಟವರ ಸಂಖ್ಯೆ ಕಳೆದ ವರ್ಷದ ಇದೇ ಅವಧಿಯಲ್ಲಿ ಮೃತಪಟ್ಟ ಸಂಖ್ಯೆಗೆ ಹೋಲಿಸಿದರೆ 1,500ರಷ್ಟು ಕಡಿಮೆ.