ಪ್ರಧಾನಿ ಕ್ಷೇತ್ರ ವಾರಣಾಸಿಯ ಆಸ್ಪತ್ರೆಗೆ ಸೈಕಲ್ನಲ್ಲಿ ತಲುಪಿದ ಕೋವಿಡ್ ಲಸಿಕೆ
ಲಕ್ನೋ, ಜ. 5: ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರ ವಾರಣಾಸಿಯ ಆಸ್ಪತ್ರೆಯೊಂದಕ್ಕೆ ಕೋವಿಡ್-19 ಲಸಿಕೆಯನ್ನು ಸೈಕಲ್ನಲ್ಲಿ ತರಲಾಗಿದೆ. ಇದು ಕೋವಿಡ್-19 ಲಸಿಕೆಯ ಸಿದ್ಧತೆ ಬಗ್ಗೆ ಪ್ರಶ್ನೆ ಎತ್ತುವಂತೆ ಮಾಡಿದೆ.
ವಾರಣಾಸಿಯ ಚೌಕಘಾಟ್ನಲ್ಲಿರುವ ಮಹಿಳೆಯರ ಆಸ್ಪತ್ರೆಯಲ್ಲಿ ಈ ಘಟನೆ ವರದಿಯಾಗಿದೆ. ಆಸ್ಪತ್ರೆಯ ಸಿಬ್ಬಂದಿ ಕೋವಿಡ್-19 ಲಸಿಕೆಗಳನ್ನು ಸೈಕಲ್ನಲ್ಲಿ ತಂದಿರುವುದು ಬೆಳಕಿಗೆ ಬಂದಿದೆ.
ಈ ಘಟನೆ ಬಗ್ಗೆ ಪ್ರಶ್ನಿಸಿದಾಗ ವಾರಣಾಸಿ ಸಿಎಂಒ ಡಾ. ವಿ.ಬಿ. ಸಿಂಗ್, ಲಸಿಕೆಯನ್ನು ಐದು ಕೇಂದ್ರಗಳಿಗೆ ವ್ಯಾನ್ನಲ್ಲಿ ಸಾಗಾಟ ಮಾಡಲಾಗಿದೆ. ಮಹಿಳೆಯರ ಆಸ್ಪತ್ರೆಗೆ ಮಾತ್ರ ಸೈಕಲ್ನಲ್ಲಿ ತರಲಾಗಿದೆ ಎಂದಿದ್ದಾರೆ.
ಭದ್ರತೆಯ ವ್ಯವಸ್ಥೆಯಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆದರೆ, ಲಸಿಕೆಯನ್ನು ಸೈಕಲ್ನಲ್ಲಿ ಸಾಗಾಟ ಮಾಡಿರುವುದು ವಾರಣಾಸಿ ಜಿಲ್ಲಾಡಳಿತದ ಸಿದ್ಧತೆಯನ್ನು ಪ್ರಶ್ನಿಸುವಂತೆ ಮಾಡಿದೆ.
ಇಡೀ ರಾಜ್ಯದಲ್ಲಿ ಕೋವಿಡ್ ಲಸಿಕೆ ವ್ಯವಸ್ಥೆಯನ್ನು ಸಬಲಗೊಳಸಲು ಡ್ರೈರನ್ (ಪೂರ್ವಾಭ್ಯಾಸ)ಅನ್ನು ಪ್ರಾಮಾಣಿಕ ಹಾಗೂ ಬದ್ಧತೆಯಿಂದ ನಡೆಸುವಂತೆ ಕಳೆದ ಸೋಮವಾರ ಮುಖ್ಯಮಂತ್ರಿ ಆದಿತ್ಯನಾಥ್ ನಿರ್ದೇಶಿಸಿದ್ದರು.