ಕೊರೋನ ಸಕ್ರಿಯ ಪ್ರಕರಣ ನಿರಂತರ ಇಳಿಮುಖ: ಆರೋಗ್ಯ ಇಲಾಖೆ
ಹೊಸದಿಲ್ಲಿ, ಜ.11: ದೇಶದಲ್ಲಿ ಕೊರೋನ ಸೋಂಕಿನ ಸಕ್ರಿಯ ಪ್ರಕರಣಗಳ ಪ್ರಮಾಣ ನಿರಂತರ ಇಳಿಕೆಯಾಗುತ್ತಿದ್ದು ಈಗ ಒಟ್ಟು ಪ್ರಕರಣಗಳ ಕೇವಲ 2.13% ಮಾತ್ರವಿದೆ ಎಂದು ಆರೋಗ್ಯ ಇಲಾಖೆ ಸೋಮವಾರ ಹೇಳಿದೆ.
ಸೋಮವಾರದ ಬೆಳಗ್ಗಿನವರೆಗಿನ 24 ಗಂಟೆಯ ಅವಧಿಯಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 170ಕ್ಕೂ ಕಡಿಮೆಯಾಗಿದೆ. ಇದೇ ಅವಧಿಯಲ್ಲಿ 16,959 ಮಂದಿ ಚೇತರಿಸಿಕೊಂಡಿದ್ದಾರೆ. ಹೊಸ ಪ್ರಕರಣಗಳ ಇಳಿಮುಖ, ಚೇತರಿಕೆ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣ ಗಣನೀಯವಾಗಿ ಕಡಿಮೆಯಾಗುತ್ತಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ 2.25 ಲಕ್ಷವಾಗಿದೆ.ಸೋಮವಾರ ಬೆಳಗ್ಗಿನವರೆಗಿನ ಅಂಕಿ ಅಂಶದಂತೆ ದೇಶದಲ್ಲಿ ಕೊರೋನ ಚೇತರಿಕೆಯ ಒಟ್ಟು ಪ್ರಮಾಣ 1,00,92,909 ಆಗಿದೆ. ಚೇತರಿಕೆ ಮತ್ತು ಸಕ್ರಿಯ ಪ್ರಕರಣಗಳ ನಡುವಿನ ಅಂತರ ನಿರಂತರ ಏರಿಕೆಯಾಗುತ್ತಿದೆ. ಕೊರೋನದಿಂದ ಚೇತರಿಕೆ ಪ್ರಮಾಣ 96.43%ಕ್ಕೆ ಹೆಚ್ಚಿದ್ದು ಇದು ವಿಶ್ವದಲ್ಲೇ ಅತ್ಯಧಿಕವಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.
Next Story