ಅಮೆರಿಕ: ಪತ್ನಿ, ಪುತ್ರಿಯನ್ನು ಕೊಂದು ಭಾರತ ಮೂಲದ ವ್ಯಕ್ತಿ ಆತ್ಮಹತ್ಯೆ
ನ್ಯೂಯಾರ್ಕ್, ಜ. 15: ಅಮೆರಿಕದಲ್ಲಿ ವಾಸಿಸುತ್ತಿರುವ ಭಾರತ ಮೂಲದ ವ್ಯಕ್ತಿಯೊಬ್ಬರು ತನ್ನ ಪತ್ನಿ ಮತ್ತು ಮಗಳನ್ನು ಗುಂಡು ಹಾರಿಸಿ ಕೊಂದು, ಬಳಿಕ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನ್ಯೂಯಾರ್ಕ್ ರಾಜ್ಯ ಪೊಲೀಸರು ತಿಳಿಸಿದ್ದಾರೆ.
ಆಲ್ಬನಿ ಸಮೀಪದ ಸ್ಕೋಡಕ್ ಪಟ್ಟಣದಲ್ಲಿರುವ ತನ್ನ ಮನೆಯಲ್ಲಿ 57 ವರ್ಷದ ಭೂಪಿಂದರ್ ಸಿಂಗ್ ತನ್ನ 55 ವರ್ಷದ ಪತ್ನಿ ಮನ್ಜೀತ್ ಕೌರ್ ಮತ್ತು 14 ವರ್ಷದ ಮಗಳು ಜಸ್ಲೀನ್ ಕೌರ್ರನ್ನು ಬುಧವಾರ ರಾತ್ರಿ ಗುಂಡಿಟ್ಟು ಸಾಯಿಸಿದ್ದಾರೆ ಎನ್ನಲಾಗಿದೆ.
ಮನೆಯಲ್ಲಿದ್ದ ಇನ್ನೋರ್ವ ಮಹಿಳೆ 40 ವರ್ಷದ ರಶ್ಪಾಲ್ ಕೌರ್ ಕೈಗೆ ಗುಂಡಿನ ಗಾಯವಾಗಿದೆ. ಆದರೆ, ಅವರು ಆಗ ಮನೆಯಿಂದ ಓಡಿ ಹೋಗಿದ್ದು ಅಪಾಯದಿಂದ ಪಾರಾಗಿದ್ದಾರೆ.
ರಶ್ಪಾಲ್ ಕೌರ್ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಹೇಳಿಕೆಯನ್ನು ಪಡೆಯಲು ಪೊಲೀಸರು ಕಾಯುತ್ತಿದ್ದಾರೆ.
Next Story