ಕೇರಳದಲ್ಲಿ ಕೊರೋನ ಸೋಂಕಿನ ಪ್ರಕರಣಗಳಲ್ಲಿ ಏರಿಕೆ: ಕಾರಣವೇನು ಗೊತ್ತಾ ?
ಹೊಸದಿಲ್ಲಿ, ಜ. 25: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ 13,203 ದಾಖಲಾಗಿದೆ. ಇದರೊಂದಿಗೆ ದೇಶದ ಒಟ್ಟು ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ 1.84 ಕೋಟಿಗೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ದತ್ತಾಂಶ ತಿಳಿಸಿದೆ.
13,203 ಪ್ರಕರಣಗಳಲ್ಲಿ 6.036 ಅಥವಾ ಶೇ. 45 ಪ್ರಕರಣಗಳು ಕೇರಳದಿಂದ ವರದಿಯಾಗಿವೆ ಎಂದು ಅದು ಹೇಳಿದೆ. ಕೊರೋನ ಸೋಂಕಿನಿಂದ ತೀವ್ರ ಬಾಧಿತ ರಾಜ್ಯವಾದ ಮಹಾರಾಷ್ಟ್ರ ಸೇರಿದಂತೆ ದೇಶದ ಹೆಚ್ಚಿನ ರಾಜ್ಯಗಳಲ್ಲಿ ದಿನನಿತ್ಯ ದಾಖಲಾಗುತ್ತಿರುವ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ ತೀವ್ರ ಇಳಿಕೆಯಾಗುತ್ತಿವೆ. ಕಳೆದ ಕೆಲವು ದಿನಗಳಲ್ಲಿ ದೇಶದಲ್ಲೇ ಅತ್ಯಧಿಕ ಕೊರೋನ ಸೋಂಕಿನ ಪ್ರಕರಣಗಳು ಕೇರಳದಿಂದ ವರದಿಯಾಗಿವೆ.
ಕೇರಳದ ರಾಜಧಾನಿ ತಿರುವನಂತಪುರ ಸೇರಿದಂತೆ ರಾಜ್ಯದ ದಕ್ಷಿಣದ ಕನಿಷ್ಠ 11 ಜಿಲ್ಲೆಗಳು ದೇಶದಲ್ಲಿ ದಿನಂಪ್ರತಿ ಅತ್ಯಧಿಕ ಸಂಖ್ಯೆಯ ಕೊರೋನ ಸೋಂಕಿನ ಪ್ರಕರಣಗಳು ವರದಿಯಾಗುತ್ತಿರುವ ಟಾಪ್ 20 ಜಿಲ್ಲೆಗಳಲ್ಲಿ ಸೇರಿದೆ ಎಂದು ಆರೋಗ್ಯ ಸಚಿವಾಲಯ ಮೂಲಗಳು ತಿಳಿಸಿವೆ. ತಿರುವನಂತಪುರ ಅಲ್ಲದೆ, ಎರ್ನಾಕುಳಂ, ಆಲೆಪ್ಪಿ, ಕೊಟ್ಟಾಯಂ ಹಾಗೂ ಪತ್ತನಂತಿಟ್ಟ ಜಿಲ್ಲೆಗಳಲ್ಲಿ ಅತ್ಯಧಿಕ ಕೊರೋನ ಸೋಂಕಿನ ಪ್ರಕರಣಗಳು ವರದಿಯಾಗಿವೆ.
ರಾಜ್ಯದಲ್ಲಿ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆಯಾಗಲು ಸಂಪರ್ಕ ಪತ್ತೆಯ ಕೊರತೆ ಹಾಗೂ ಕಡಿಮೆ ಸಂಖ್ಯೆಯ ಮಾದರಿ ಪರೀಕ್ಷೆ ಮುಖ್ಯ ಕಾರಣ ಎಂದು ಅದು ಮೂಲಗಳು ತಿಳಿಸಿವೆ. ಕೊರೋನ ಸೋಂಕಿನಿಂದ ತೀವ್ರ ಬಾಧಿತ ರಾಜ್ಯಗಳಿಗೆ ನೆರವು ನೀಡಲು ಕೇಂದ್ರ ಸರಕಾರ ರೂಪಿಸಿದ ಕೇಂದ್ರ ತಂಡ ಶಿಫಾರಸು ಮಾಡಿದ ಹೊರತಾಗಿಯೂ ಕೊರೋನ ಮಾದರಿ ಪರೀಕ್ಷೆಯ ಸಂಖ್ಯೆಯನ್ನು ಹೆಚ್ಚಿಸಿಲ್ಲ ಎಂದು ಕೇರಳ ರಾಜ್ಯ ಸರಕಾರದ ಮೂಲಗಳು ತಿಳಿಸಿವೆ. ‘‘ಸಂಪರ್ಕ ಪತ್ತೆಯನ್ನು ಕೇರಳ ಅನುಸರಿಸಿಲ್ಲ. ಪ್ರತಿ ಪ್ರಕರಣದಲ್ಲಿ ಕನಿಷ್ಠ 4-5 ಸಂಪರ್ಕ ಪತ್ತೆಹಚ್ಚುವುದು ಅತ್ಯಗತ್ಯ. ರಾಜ್ಯದಲ್ಲಿ ವೈದ್ಯಕೀಯ ನಿರ್ವಹಣೆ ಶಸಕ್ತಗೊಳಿಸುವ ಅಗತ್ಯತೆ ಇದೆ’’ ಎಂದು ಮೂಲಗಳು ತಿಳಿಸಿವೆ.