ಧೋನಿ ಜೀವನಾಧಾರಿತ ಚಿತ್ರದಲ್ಲಿ ನಟಿಸಿದ್ದ ಸುಶಾಂತ್ ಸಿಂಗ್ ರಜಪೂತ್ ಸಹನಟ ಸಂದೀಪ್ ನಹಾರ್ ಆತ್ಮಹತ್ಯೆ
ಮುಂಬೈ: ಅಕ್ಷಯ್ ಕುಮಾರ್ ನಟಿಸಿರುವ ಕೇಸರಿ ಹಾಗೂ ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೆ ಎಂಎಸ್ ಧೋನಿ ಜೀವನಾಧಾರಿತ ಚಿತ್ರದಲ್ಲಿ ನಟಿಸಿರುವ ಸಂದೀಪ್ ನಹಾರ್ ಸೋಮವಾರ ಗೋರೆಗಾಂವ್ ನಲ್ಲಿರುವ ತಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಮೊದಲು ಫೇಸ್ ಬುಕ್ ನಲ್ಲಿ ಸುದೀರ್ಘ ಬರಹದ ಜೊತೆಗೆ ವೀಡಿಯೊವನ್ನು ಹಾಕಿದ್ದರು. ತಾನು ವೈಯಕ್ತಿಕ ಹಾಗೂ ವೃತ್ತಿಪರ ಜೀವನದಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೇನೆಂದು ತಿಳಿಸಿದ್ದಾರೆ.
ನಟ ಸಂದೀಪ್ ಅವರು ಅಕ್ಷಯಕುಮಾರ್ ಹಾಗೂ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೆ ಸಹ ನಟನಾಗಿ ಕಾಣಿಸಿಕೊಂಡಿದ್ದರು.
ಮುಂಬೈ ನಿವಾಸಿಯಾಗಿದ್ದ ಸಂದೀಪ್ ರನ್ನು ಗೋರೆಗಾಂವ್ ಪಶ್ಚಿಮದ ಆಸ್ಪತ್ರೆಗೆ ಸೇರಿಸುವ ಮೊದಲೇ ಮೃತಪಟ್ಟಿದ್ದರು. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ತನ್ನ ಸುದೀರ್ಘ ಫೇಸ್ ಬುಕ್ ಬರಹದಲ್ಲಿ ಎರಡು ವರ್ಷಗಳಹಿಂದೆ ವಿವಾಹವಾಗಿದ್ದ ಪತ್ನಿ ಕಾಂಚನಾ ಹಾಗೂ ಅತ್ತೆ ಕಿರುಕುಳ ಹಾಗೂ ಬ್ಲಾಕ್ ಮೇಲ್ ಮಾಡುತ್ತಿದ್ದರು ಎಂದು ಆರೋಪಿಸಿದ್ದರು. ತನಗೆ ಹಾಗೂ ಪತ್ನಿಯ ನಡುವೆ ಸಂಬಂಧ ಸರಿಯಿರಲಿಲ್ಲ. ಹೀಗಾಗಿ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಬರೆದಿದ್ದಾರೆ.