ದೇಶದಲ್ಲಿ ಇಂಧನ ತೆರಿಗೆ ಹೊರೆಯಾಗುತ್ತಿರುವುದು ಯಾರಿಗೆ ಗೊತ್ತೇ?
ಹೊಸದಿಲ್ಲಿ, ಮಾ.6: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ವಿಧಿಸಿರುವ ಭಾರಿ ತೆರಿಗೆ ಮುಖ್ಯವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಕ್ಕೇರಲು ಮುಖ್ಯ ಕಾರಣವಾಗಿದ್ದು, ಶ್ರೀಮಂತರ ಮೇಲೆ ಇದರ ಪರಿಣಾಮ ಹೆಚ್ಚು ಎನ್ನುವುದು ಸಾಮಾನ್ಯ ನಂಬಿಕೆ. ಆದರೆ ವಾಸ್ತವವಾಗಿ ಸ್ವಂತ ವಾಹನ ಇಲ್ಲದ ಬಡವರನ್ನು ತೆರಿಗೆ ಹೊರೆ ಹೆಚ್ಚಾಗಿ ಬಾಧಿಸುತ್ತಿದೆ. ಭಾರತದ ಇತ್ತೀಚಿನ ಬಳಕೆ ವೆಚ್ಚ ಸಮೀಕ್ಷೆ, ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ ಅಂಕಿಅಂಶಗಳ ಪ್ರಕಾರ, ಇಂಧನ ಬೆಲೆ ಏರಿಕೆಯ ಹೊರೆ ಶ್ರೀಮಂತರಿಗೆ ಹೆಚ್ಚು. ಆದಾಗ್ಯೂ 2014ರಲ್ಲಿ ಪೆಟ್ರೋಲಿಯಂ ಸಚಿವಾಲಯ ನಡೆಸಿದ ಸಮೀಕ್ಷೆಯಿಂದ ತಿಳಿದುಬರುವಂತೆ ಹೆಚ್ಚಿನ ತೆರಿಗೆ ಹೊರೆ ಶ್ರೀಮಂತರಿಗಿಂತ ಹೆಚ್ಚಾಗಿ ಬಡವರನ್ನು ಬಾಧಿಸುತ್ತಿದೆ.
ಎನ್ಎಫ್ಎಚ್ಎಸ್ ಮತ್ತು ಸಿಇಎಸ್ ಸಮೀಕ್ಷೆಗಳ ಪ್ರಕಾರ ಪೆಟ್ರೋಲ್- ಡೀಸೆಲ್ ಬೆಲೆ ಹೆಚ್ಚಿದಾಗ ಬಡವರಿಗೆ ತೊಂದರೆಯಾಗುವುದಿಲ್ಲ. ಎನ್ಎಫ್ಎಚ್ಎಸ್ 2015-16ರ ಸಮೀಕ್ಷೆ ಪ್ರಕಾರ ಭಾರತದಲ್ಲಿ ಶೇಕಡ 6ರಷ್ಟು ಕುಟುಂಬಗಳು ಮಾತ್ರ ಕಾರು ಅಥವಾ ಟ್ರಕ್ ಹೊಂದಿವೆ. ದ್ವಿಚಕ್ರ ವಾಹನ ಹೊಂದಿರುವವರ ಪ್ರಮಾಣ ಶೇಕಡ 38ರಷ್ಟಿದೆ. ಈ ವರ್ಗ ಬಳಸುವ ಪೆಟ್ರೋಲ್ ಹಾಗೂ ಡೀಸೆಲ್ ಪ್ರಮಾಣ ಅತ್ಯಲ್ಪ ಎನ್ನುವುದು ಸಮೀಕ್ಷೆಯ ವಾದ.
2011-12ರಲ್ಲಿ ಕುಟುಂಬದ ಮಾಸಿಕ ಆದಾಯದ ಶೇಕಡ 2.4ನ್ನು ಮಾತ್ರ ಇಂಧನದ ಮೇಲೆ ವೆಚ್ಚ ಮಾಡಲಾಗುತ್ತಿದೆ. ಆದ್ದರಿಂದ ಪೆಟ್ರೋಲ್/ಡೀಸೆಲ್ ಬೆಲೆ ಹೆಚ್ಚಿದಾಗ ಇವರ ಮೇಲಾಗುವ ಹೊರೆ ಕಡಿಮೆ ಎನ್ನುವುದು ಸಮೀಕ್ಷೆಯ ಸಾರ.
ಆದರೆ ವಾಸ್ತವವಾಗಿ ಸಮಸ್ಯೆ ಇರುವುದು ಪರೋಕ್ಷ ತೆರಿಗೆಯದ್ದು. ಈ ಸಮೀಕ್ಷೆ ಪರೋಕ್ಷ ತೆರಿಗೆಯ ಹೊರೆಯನ್ನು ಗಣನೆಗೆ ತೆಗೆದುಕೊಂಡಿಲ್ಲ. ನಿರ್ದಿಷ್ಟ ತೆರಿಗೆ ಯಾವ ವರ್ಗದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂದು ಇದು ಹೇಳುವುದಿಲ್ಲ. ಸರಳ ಉದಾಹರಣೆ ಮೂಲಕ ವಿವರಿಸುವುದಾದರೆ ಆರ್ಥಿಕತೆಯಲ್ಲಿ 10 ಮಂದಿ ಇದ್ದರೆ, ಶ್ರೀಮಂತ ವ್ಯಕ್ತಿಗೆ ಕಾರು ಇದ್ದು, ಐದು ಮಂದಿಗೆ ದ್ವಿಚಕ್ರ ವಾಹನ ಇದೆ. ಐದು ಮಂದಿಯ ಆದಾಯ, ಶ್ರೀಮಂತ ವ್ಯಕ್ತಿಯ ಆದಾಯದ 70%, 40%, 35%, 30% ಹಾಗೂ 25% ಇದೆ ಅಂದುಕೊಳ್ಳೋಣ. ಅಂದರೆ ಐದು ಮಂದಿ ಸೇರಿ ಶ್ರೀಮಂತ ವ್ಯಕ್ತಿಯ ದುಪ್ಪಟ್ಟು ಆದಾಯ ಹೊಂದಿದ್ದಾರೆ. ಕಾರು ಮಾಲಕ ತಿಂಗಳಿಗೆ 100 ಲೀಟರ್ ಪೆಟ್ರೋಲ್ ಬಳಸುತ್ತಾನೆ ಅಂದುಕೊಂಡರೆ ಒಂದು ರೂಪಾಯಿ ಹೆಚ್ಚಳವಾದಲ್ಲಿ ಆತನ ಮೇಲಿನ ತೆರಿಗೆ ಹೊರೆ 100 ರೂಪಾಯಿ ಆಗುತ್ತದೆ. ಐದು ಮಂದಿ ದ್ವಿಚಕ್ರ ವಾಹನ ಮಾಲಕರು 0.25 ರೂಪಾಯಿ ತೆರಿಗೆ ಪಾವತಿಸುತ್ತಿದ್ದಾರೆ ಅಂದುಕೊಂಡರೂ ಅವರು ಪಾವತಿಸುವ ತೆರಿಗೆ 2.5 ಪಟ್ಟು ಅಧಿಕವಾಗುತ್ತದೆ. ಇದು ಭಾರತದಲ್ಲಿ ತೆರಿಗೆ ಹೊರೆಯ ಸ್ಪಷ್ಟ ಚಿತ್ರಣ ನೀಡುತ್ತದೆ.
ಭಾರತ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 100 ರೂಪಾಯಿ ತೆರಿಗೆ ಪಡೆಯುತ್ತಿದೆ ಎಂದಾದಲ್ಲಿ ಈ ಪೈಕಿ ದ್ವಿಚಕ್ರ ವಾಹನಗಳ ಬಳಕೆಯಿಂದ ಪಡೆಯುವ ತೆರಿಗೆ 60 ರೂಪಾಯಿ ಹಾಗೂ ಕಾರು ಮಾಲಕರಿಂದ ಪಡೆಯುವ ತೆರಿಗೆ 37 ರೂಪಾಯಿ. ಆದ್ದರಿಂದ ಬಡವರ್ಗದ ಮೇಲಿನ ತೆರಿಗೆ ಹೊರೆ ಅಧಿಕ ಎನ್ನುವುದು ಸ್ಪಷ್ಟ.