ಅಂತ್ಯಕ್ರಿಯೆಗೆ ತಾಯಿಯ ಶವ ಭುಜದ ಮೇಲೆ ಹೊತ್ತು ಸಾಗಿದ ಮಗ
ಕೋವಿಡ್ ಸೋಂಕು ಭೀತಿಯಲ್ಲಿ ನೆರವಿಗೆ ಬಾರದ ಸ್ಥಳೀಯರು, ಸಂಬಂಧಿಕರು
photo: OUTLOOK
ಶಿಮ್ಲಾ: ಕೋವಿಡ್ -19 ರಿಂದ ಮೃತಪಟ್ಟ ತಾಯಿಯ ಶವವನ್ನು ವ್ಯಕ್ತಿಯೊಬ್ಬ ಭುಜದ ಮೇಲೆ ಹೊತ್ತುಕೊಂಡು ಶವಸಂಸ್ಕಾರಕ್ಕಾಗಿ ಸಾಗಿಸಿರುವ ಹೃದಯ ವಿದ್ರಾವಕ ಘಟನೆ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ ನಡೆದಿದೆ.
ಮಾರಕ ವೈರಸ್ ಸೋಂಕಿಗೆ ಒಳಗಾಗುವ ಭಯದಿಂದ ತನ್ನ ಸಂಬಂಧಿಕರು, ಗ್ರಾಮಸ್ಥರು ಹಾಗೂ ಜಿಲ್ಲಾಧಿಕಾರಿಯು ತನಗೆ ಯಾವುದೇ ಸಹಾಯ ನೀಡದ ಕಾರಣ ವ್ಯಕ್ತಿಯು ಅನಿವಾರ್ಯವಾಗಿ ತನ್ನ ಭುಜದ ಮೇಲೆ ತಾಯಿಯ ಶವವನ್ನು ಹೊತ್ತು ಸಾಗಬೇಕಾಯಿತು.
ಕಾಂಗ್ರಾ ಜಿಲ್ಲೆಯ ರನಿಟಲ್ ಪ್ರದೇಶದ ವೀರ್ ಸಿಂಗ್ ಅವರು ಇಂತಹ ಪರಿಸ್ಥಿತಿ ಎದುರಿಸಬೇಕಾಯಿತು.. ಭಂಗವರ್ ಪಂಚಾಯತ್ನ ಮಾಜಿ ಅಪ್-ಪ್ರಧಾನ್ ಆಗಿದ್ದ ಅವರ ತಾಯಿ ಬುಧವಾರ ಮನೆಯಲ್ಲಿ ನಿಧನರಾಗಿದ್ದರು.
ತಾಯಿಯ ಶವ ಹೊತ್ತುಕೊಂಡು ಶವಸಂಸ್ಕಾರದ ಮೈದಾನಕ್ಕೆ ಹೋಗುವ ವೀರ್ ಸಿಂಗ್ ಅವರ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಚಿತ್ರ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರ ಗಮನ ಸೆಳೆದಿದೆ. ಠಾಕೂರ್ ಅವರು ಕೋವಿಡ್ -19ನಿಂದ ಮೃತಪಟ್ಟವರ ಅಂತಿಮ ವಿಧಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ಕುಟುಂಬ ಕಲ್ಯಾಣ ಮಾರ್ಗಸೂಚಿಗಳು ಅನುಸಾರವಾಗಿ ಕಟ್ಟುನಿಟ್ಟಾಗಿ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ..