ಸೆಂಟ್ರಲ್ ವಿಸ್ಟಾ ಯೋಜನೆ: ರಾಷ್ಟ್ರೀಯ ಪತ್ರಾಗಾರದಲ್ಲಿನ ದಾಖಲೆಗಳ ಸುರಕ್ಷತೆ ಬಗ್ಗೆ ಇತಿಹಾಸತಜ್ಞರ ಆತಂಕ
ಹೊಸದಿಲ್ಲಿ,ಜೂ.11: ಸೆಂಟ್ರಲ್ ವಿಸ್ತಾ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ ನೂತನ ಕಟ್ಟಡ ನಿರ್ಮಾಣಕ್ಕಾಗಿ ಕೆಡವಲಾಗುವ ರಾಷ್ಟ್ರೀಯ ಪತ್ರಾಗಾರದ ಉಪಕಟ್ಟಡದಲ್ಲಿರುವ ದಾಖಲೆಗಳನ್ನು ಹೇಗೆ ಸಂಗ್ರಹಿಸಿಡಲಾಗುತ್ತಿದೆಯೆಂಬ ಕುರಿತು ಸ್ಪಷ್ಟೀಕರಣ ನೀಡಬೇಕೆಂದು ಕೋರಿ ಭಾರತ ಹಾಗೂ ಜಗತ್ತಿನಾದ್ಯಂತದ 100ಕ್ಕೂ ಅಧಿಕ ಇತಿಹಾಸಕಾರರು ರಾಷ್ಟ್ರೀಯ ಪತ್ರಾಗಾರದ ವರಿಷ್ಠರಿಗೆ ಪತ್ರ ಬರೆದಿದ್ದಾರೆ.
ಐತಿಹಾಸಿಕ ಸಂಶೋಧನೆಗೆ ಪೂರಕವಾದಂತಹ ಹಲವಾರು ಮಹತ್ವದ ದಾಖಲೆಗಳು ಭಾರತೀಯ ಪತ್ರಾಗಾರ ಭವನದ ಉಪಕಟ್ಟಡದಲ್ಲಿರುವುದನ್ನು ಅಮೆರಿಕ ಹಾಗೂ ಭಾರತೀಯ ವಿಶ್ವವಿದ್ಯಾನಿಲಯಗಳ ಪ್ರೊಫೆಸರ್ಗಳು ಸೇರಿದಂತೆ ಪತ್ರಕ್ಕೆ ಸಹಿ ಹಾಕಿದವರು ಉಲ್ಲೇಖಿಸಿದ್ದಾರೆ. ಪ್ರಸಕ್ತ ಉಪಕಟ್ಟಡದಲ್ಲಿರುವಂತಹ ಸಾಮಾಗ್ರಿಗಳು ಏನಾಗಲಿವೆಯೆಂದು ಅವರು ರಾಷ್ಟ್ರೀಯ ಪತ್ರಾಗಾರದ ಮಹಾನಿರ್ದೇಶಕ ಚಂದನ್ ಸಿನ್ಹಾ ಅವರನ್ನು ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ಪತ್ರಾಗಾರದ ಉಪಕಟ್ಟಡದಲ್ಲಿರುವ ದಾಖಲೆಸಾಮಾಗ್ರಿಗಳನ್ನು ಪುನರ್ವಸತಿಗೊಳಿಸುವ ಪ್ರಸ್ತಾವನೆಯ ಬಗ್ಗೆ ಮಾಹಿತಿಯನ್ನು ನೀಡುವಂತೆ ಅವರು ಕೋರಿದ್ದಾರೆ. ಕಟ್ಟಡದ ಧ್ವಂಸದ ಬಳಿಕ ದಾಖಲೆಗಳನ್ನು ಸುರಕ್ಷಿತವಾಗಿಡುವಂತೆ ಹಾಗೂ ಉಪಕಟ್ಟಡವನ್ನು ಪುನರ್ನಿರ್ಮಿಸಬೇಕೆಂದು ಆಗ್ರಹಿಸುವುದಾಗಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಪತ್ರಾಗಾರದ ಉಪಕಟ್ಟಡವನ್ನು ಕೆಡವಲಾಗುತ್ತಿದೆಯಾದರೂ ಮುಖ್ಯಕಟ್ಟಡವನ್ನು ಉಳಿಸಲಾಗುತ್ತಿದೆಯೆಂದು ಕೇಂದ್ರ ಸರಕಾರ ಇತ್ತೀಚೆಗೆ ತಿಳಿಸಿತ್ತು.