ಪುಲ್ವಾಮಾ: ಮನೆಗೆ ನುಗ್ಗಿದ ಉಗ್ರರಿಂದ ಪೊಲೀಸ್ ಅಧಿಕಾರಿ, ಪತ್ನಿಯ ಹತ್ಯೆ
ಸಾಂದರ್ಭಿಕ ಚಿತ್ರ
ಶ್ರೀನಗರ, ಜೂ.28: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ರವಿವಾರ ರಾತ್ರಿ ಪೊಲೀಸ್ ವಿಶೇಷ ಅಧಿಕಾರಿಯೊಬ್ಬರ ಮನೆಗೆ ನುಗ್ಗಿದ ಉಗ್ರಗಾಮಿಗಳು ಪೊಲೀಸ್ ಅಧಿಕಾರಿ ಹಾಗೂ ಅವರ ಪತ್ನಿಯನ್ನು ಹತ್ಯೆಗೈದಿದ್ದಾರೆ. ಪುತ್ರಿಗೂ ಗಂಭೀರ ಗಾಯಗಳಾಗಿವೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಅವಂತಿಪುರ ನಿವಾಸಿ ಫಯಾರ್ ಅಹ್ಮದ್ ಹತ್ಯೆಗೀಡಾದ ಅಧಿಕಾರಿ. ರಾತ್ರಿ 11 ಗಂಟೆ ವೇಳೆಗೆ ಮನೆಗೆ ನುಗ್ಗಿದ ಉಗ್ರರು ಕುಟುಂಬದ ಮೇಲೆ ಗುಂಡಿನ ಮಳೆಗೆರೆದರು ಎಂದು ಅಧಿಕಾರಿಗಳು ಹೇಳಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ. ಅಧಿಕಾರಿ ಹಾಗೂ ಅವರ ಪತ್ನಿ ರಝಾ ಬೇಗಂ ತೀವ್ರ ಗಾಯದಿಂದ ಮೃತಪಟ್ಟರು. ಪುತ್ರಿ ರಾಫಿಯಾ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿವರಿಸಿದ್ದಾರೆ.
ಇಡೀ ಪ್ರದೇಶವನ್ನು ಸುತ್ತುವರಿದು ಉಗ್ರರ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಭದ್ರತಾ ಪಡೆಗಳು ಹೇಳಿವೆ. ಜಮ್ಮುವಿನಲ್ಲಿ ವಾಯುಪಡೆ ನೆಲೆಯ ಮೇಲೆ ಉಗ್ರರು ಡ್ರೋನ್ ದಾಳಿ ನಡೆಸಿದ ಬೆನ್ನಲ್ಲೇ ಈ ಘಟನೆ ನಾಗರಿಕರನ್ನು ಬೆಚ್ಚಿ ಬೀಳಿಸಿದೆ. ಭಾರತದ ಸೇನಾ ನೆಲೆಯ ಮೇಲೆ ಡ್ರೋನ್ ದಾಳಿ ನಡೆದಿರುವುದು ಇದೇ ಮೊದಲು ಎನ್ನಲಾಗಿದೆ.
ರವಿವಾರ ಮುಂಜಾನೆ 2 ಗಂಟೆಯ ವೇಳೆಗೆ ನಡೆದ ಈ ದಾಳಿಯಲ್ಲಿ ಇಬ್ಬರು ವಾಯುಪಡೆ ಸಿಬ್ಬಂದಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು. ಈ ಅತ್ಯಧಿಕ ಭದ್ರತೆಯ ವಿಮಾನ ನಿಲ್ದಾಣ ಪಾಕಿಸ್ತಾನ ಗಡಿಯಿಂದ 14 ಕಿಲೋ ಮೀಟರ್ ದೂರದಲ್ಲಿದೆ.