ಪಂಜಾಬ್ ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷ ಜಯ ಗಳಿಸಿದರೆ 300 ಯೂನಿಟ್ ವಿದ್ಯುತ್ ಉಚಿತ: ಕೇಜ್ರಿವಾಲ್
ಚಂಡಿಗಢ, ಜೂ. 29: ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಜಯ ಗಳಿಸಿದರೆ ಪ್ರತಿ ಮನೆಗೆ ಪ್ರತಿ ತಿಂಗಳು 300 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದು ಅರವಿಂದ ಕೇಜ್ರಿವಾಲ್ ಮಂಗಳವಾರ ಭರವಸೆ ನೀಡಿದ್ದಾರೆ.
ಪಂಜಾಬ್ನಲ್ಲಿ ತನ್ನ ಪಕ್ಷ ಅಧಿಕಾರಕ್ಕೆ ಬಂದರೆ, 24 ಗಂಟೆಗಳ ಕಾಲ ವಿದ್ಯುತ್ ಪೂರೈಸಲಾಗುವುದು ಹಾಗೂ ಬಾಕಿ ಇರುವ ವಿದ್ಯುತ್ ಬಿಲ್ ಅನ್ನು ಮನ್ನಾ ಮಾಡಲಾಗುವುದು ಎಂದು ಕೂಡ ಅವರು ಹೇಳಿದ್ದಾರೆ.
ಚಂಡಿಗಢಕ್ಕೆ ಭೇಟಿ ನೀಡುವ ಮುನ್ನಾ ದಿನ ಕೇಜ್ರಿವಾಲ್, ಪಂಜಾಬ್ನಲ್ಲಿ ತನ್ನ ಪಕ್ಷ ಅಧಿಕಾರಕ್ಕೆ ಬಂದರೆ ವಿದ್ಯುತ್ ಉಚಿತವಾಗಿ ನೀಡಲಾಗುವುದು. ನಾವು ದಿಲ್ಲಿಯಲ್ಲಿ ಪ್ರತಿ ಕುಟುಂಬಕ್ಕೆ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತಿದ್ದೇವೆ. ಇಲ್ಲಿ ಮಹಿಳೆಯರು ತುಂಬಾ ಸಂತೋಷದಿಂದ ಇದ್ದಾರೆ. ಆದರೆ, ಪಂಜಾಬ್ನ ಮಹಿಳೆಯರು ಬೆಲೆ ಏರಿಕೆಯಿಂದ ಅಸಂತುಷ್ಟರಾಗಿದ್ದಾರೆ. ಪಂಜಾಬ್ನಲ್ಲಿ ಆಪ್ ಸರಕಾರ ಅಧಿಕಾರಕ್ಕೆ ಬಂದರೆ, ಉಚಿತ ವಿದ್ಯುತ್ ಪೂರೈಕೆ ಮಾಡಲಾಗುವುದು. ನಾಳೆ ಭೇಟಿಯಾಗೋಣ ಎಂದು ಕೇಜ್ರಿವಾಲ್ ಸೋಮವಾರ ಪಂಜಾಬಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಘೋಷಣೆ ಮಾಡಿದರು. ಪಂಜಾಬ್ ವಿಧಾನ ಸಭೆ ಚುನಾವಣೆ ಮುಂದಿನ ವರ್ಷ ಆರಂಭದಲ್ಲಿ ನಡೆಯಲಿದೆ. ಪಂಜಾಬ್ ವಿದ್ಯುತ್ ಉತ್ಪಾದನೆ ಮಾಡುತ್ತಿರುವ ಹೊರತಾಗಿಯೂ ದೇಶದಲ್ಲೇ ಪಂಜಾಬ್ನಲ್ಲಿ ವಿದ್ಯುತ್ ಅತಿ ಹೆಚ್ಚು ದುಬಾರಿ. ನಾವು ದಿಲ್ಲಿಯಲ್ಲಿ ವಿದ್ಯುತ್ ಉತ್ಪಾದಿಸುವುದಿಲ್ಲ. ಇತರ ರಾಜ್ಯಗಳಿಂದ ಖರೀದಿಸುತ್ತೇವೆ. ಆದರೂ ನಾವು ಕಡಿಮೆ ಬೆಲೆಯಲ್ಲಿ ವಿದ್ಯುತ್ ಪೂರೈಸುತ್ತಿದ್ದೇವೆ ಎಂದು ಕೇಜ್ರಿವಾಲ್ ಹೇಳಿದರು.