ಐಟಿ ಕಾಯ್ದೆಯ ಸೆಕ್ಷನ್ 66 ಎ ಬಳಕೆ ಮುಂದುವರಿಕೆ: ರಾಜ್ಯಗಳಿಗೆ ನೋಟಿಸ್ ನೀಡಿದ ಸುಪ್ರೀಂಕೋರ್ಟ್

ಹೊಸದಿಲ್ಲಿ: ಮಾರ್ಚ್ 2015ರಲ್ಲಿ ರದ್ದುಪಡಿಸಲಾಗಿರುವ ಮಾಹಿತಿ ತಂತ್ರಜ್ಞಾನದ(ಐಟಿ)ಸೆಕ್ಷನ್ 66ಎ ಅನ್ನು ಬಳಕೆ ಮುಂದುವರಿಸುತ್ತಿರುವ ಕುರಿತಾಗಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ ಸೋಮವಾರ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಎಲ್ಲಾ ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್‌ಗಳಿಗೆ ನೋಟಿಸ್ ಜಾರಿ ಮಾಡಿದೆ.
ಎನ್ ಜಿ ಒ, ಪೀಪಲ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಲ್ಲಿಸಿರುವ ಮನವಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಆರ್.ಎಫ್. ನಾರಿಮನ್ ಹಾಗೂ ಬಿ.ಆರ್. ಗವಾಯಿ ಅವರ ಪೀಠವು "ರದ್ದಾಗಿರುವ ಐಟಿ ಕಾಯ್ದೆಯ ಸೆಕ್ಷನ್ 66 ಎ ಅಡಿಯಲ್ಲಿ ಜನರ ವಿರುದ್ದ ಪ್ರಕರಣ ದಾಖಲಿಸುವ ವಿಷಯವನ್ನು ಖಾಯಂ ಆಗಿ ಇತ್ಯರ್ಥಪಡಿಸಲು ಸಮಗ್ರ ಆದೇಶವನ್ನು ನೀಡಲಾಗುವುದು’’ ಎಂದು ಹೇಳಿದೆ.
ರದ್ದಾದ ಸೆಕ್ಷನ್ ಅನ್ನು ಪೊಲೀಸ್ ಠಾಣೆಗಳಲ್ಲಿ ಮಾತ್ರವಲ್ಲದೆ ದೇಶಾದ್ಯಂತ ವಿಚಾರಣಾ ನ್ಯಾಯಾಲಯಗಳಲ್ಲಿಯೂ ಬಳಕೆಯಲ್ಲಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ “ನ್ಯಾಯಾಂಗವನ್ನು ನಾವು ಪ್ರತ್ಯೇಕವಾಗಿ ನೋಡಿಕೊಳ್ಳಬಹುದು ಆದರೆ ಪೊಲೀಸರು ಕೂಡ ಇದ್ದಾರೆ. ಒಂದು ಸರಿಯಾದ ಆದೇಶದ ಅಗತ್ಯವಿದೆ. ಏಕೆಂದರೆ ಇದು ಮುಂದುವರಿಯಲು ಸಾಧ್ಯವಿಲ್ಲ’’ ಎಂದು ಹೇಳಿದೆ.
ನಾಲ್ಕು ವಾರಗಳ ನಂತರ ಮುಂದಿನ ವಿಚಾರಣೆಗೆ ಈ ವಿಷಯವನ್ನು ಪಟ್ಟಿ ಮಾಡಲಾಗಿದೆ.
ಈ ಹಿಂದೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ರಾಜ್ಯಗಳಿಗೆ ಪತ್ರಗಳನ್ನುಬರೆದು, ರದ್ದುಗೊಳಿಸಿದ ನಿಬಂಧನೆಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಬೇಡಿ ಹಾಗೂ ಈಗಾಗಲೇ ದಾಖಲಾಗಿರುವ ಪ್ರಕರಣವನ್ನು ಹಿಂಪಡೆಯಬೇಕು ಎಂದು ತಿಳಿಸಿದೆ.







