ಅತ್ಯಾಚಾರ ಸಂತ್ರಸ್ತೆಯ ಗುರುತನ್ನು ರಾಹುಲ್ ಗಾಂಧಿ ಬಹಿರಂಗಪಡಿಸಿದ್ದಾರೆಂದು ಆರೋಪಿಸಿ ವಕೀಲನಿಂದ ಪೊಲೀಸ್ ದೂರು
ಹೊಸದಿಲ್ಲಿ: ರಾಜಧಾನಿಯ ನಂಗಲ್ ಅತ್ಯಾಚಾರ ಸಂತ್ರಸ್ತೆ ಅಪ್ರಾಪ್ತ ಬಾಲಕಿಯ ಗುರುತನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಹಿರಂಗಪಡಿಸಿದ್ದಾರೆಂದು ಆರೋಪಿಸಿ ದಿಲ್ಲಿಯ ವಕೀಲ ವಿನೀತ್ ಜಿಂದಾಲ್ ಎಂಬವರು ಪೊಲೀಸ್ ದೂರು ದಾಖಲಿಸಿದ್ದಾರೆ.
ರಾಹುಲ್ ಗಾಂಧಿ ಅವರು ತಮ್ಮ ಟ್ವಿಟರ್ ಹ್ಯಾಂಡಲ್ನಲ್ಲಿ ತಾವು ಸಂತ್ರಸ್ತೆಯ ತಂದೆ ಮತ್ತು ತಾಯಿಯ ಜತೆಗೆ ಮಾತನಾಡುತ್ತಿರುವ ಫೋಟೋ ಪೋಸ್ಟ್ ಮಾಡಿದ್ದು, ಇದು ಅಪ್ರಾಪ್ತ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಿದ್ದಕ್ಕೆ ಸಮನಾಗಿದೆ ಎಂದು ಜಿಂದಾಲ್ ಹೇಳಿದ್ದಾರಲ್ಲದೆ ದಿಲ್ಲಿ ಪೊಲೀಸರು ರಾಹುಲ್ ವಿರುದ್ಧ ಪ್ರಕರಣ ದಾಖಲಿಸಬೇಕು ಅವರ ಕೃತ್ಯವು ಪೋಕ್ಸೋ ಕಾಯಿದೆಯ ಸೆಕ್ಷನ್ 23 ಹಾಗೂ ಬಾಲನ್ಯಾಯ ಕಾಯಿದೆಯ ಸೆಕ್ಷನ್ 7 ಅನ್ವಯ ಅಪರಾಧವಾಗಿದೆ ಎಂದು ದೂರುದಾರರು ಹೇಳಿದ್ದಾರೆ.
ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗ ಕೂಡ ಮಂಗಳವಾರ ಟ್ವಿಟರ್ ಇಂಡಿಯಾಗೆ ನೋಟಿಸ್ ನೀಡಿ, ಅತ್ಯಾಚಾರ ಸಂತ್ರಸ್ತೆಯ ಗುರುತು ಬಹಿರಂಗಪಡಿಸಿದ್ದಕ್ಕೆ ರಾಹುಲ್ ಅವರ ಟ್ವಿಟರ್ ಹ್ಯಾಂಡಲ್ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಹೇಳಿದೆ.