ಉತ್ತರಪ್ರದೇಶ: 17 ವರ್ಷದ ಯುವತಿಯ ಮೇಲೆ ಮೂವರಿಂದ ಅತ್ಯಾಚಾರ
ಹೊಸದಿಲ್ಲಿ,ಸೆ. 4: ಹದಿಹರೆಯದ ಯುವತಿಯೋರ್ವಳನ್ನು ಕೋಣೆಯೊಂದರಲ್ಲಿ ದಿನಪೂರ್ತಿ ಕೂಡಿ ಹಾಕಿ ಮೂವರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಉತ್ತರಪ್ರದೇಶದ ಮಹೋಬಾ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ 17 ವರ್ಷದ ಯುವತಿಯನ್ನು ವ್ಯಕ್ತಿಯೋರ್ವ ಗುರುವಾರ ನಿರ್ಜನ ಪ್ರದೇಶದಲ್ಲಿರುವ ಬಂಗ್ಲೆಯ ಕೊಠಡಿಯೊಂದಕ್ಕೆ ಕರೆದೊಯ್ದಿದ್ದಾನೆ. ಅಲ್ಲ್ಲಿ ಆತ ಇಬ್ಬರು ಗೆಳೆಯರೊಂದಿಗೆ ಸೇರಿ ಅತ್ಯಾಚಾರ ಎಸಗಿದ್ದಾನೆ. ಅನಂತರ ಮೂವರು ಆಕೆಯನ್ನು ಕೊಠಡಿಯಲ್ಲೇ ಬಿಟ್ಟು ಬೀಗ ಹಾಕಿ ಹೊರಗೆ ಹೋಗಿದ್ದರು ಎಂದು ಮಹೋಬಾ ಕೊಟ್ವಾಲಿ ಪೊಲೀಸ್ ಠಾಣೆಯ ಎಸ್ಎಚ್ಒ ಬಲರಾಮ್ ಸಿಂಗ್ ಹೇಳಿದ್ದಾರೆ.
ಮೂವರು ಶುಕ್ರವಾರ ಹಿಂದಿರುಗಿ ಯುವತಿಯನ್ನು ಮೋಟಾರ್ ಸೈಕಲ್ನಲ್ಲಿ ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ. ಈ ಸಂದರ್ಭ ಆಕೆ ಬೈಕ್ನಿಂದ ಹಾರಿ ತಪ್ಪಿಸಿಕೊಂಡಿದ್ದಾಳೆ ಎಂದು ಅವರು ತಿಳಿಸಿದ್ದಾರೆ.
ಅತ್ಯಾಚಾರ ಎಸಗುವ ಸಂದರ್ಭ ಅವರ ವೀಡಿಯೊ ದಾಖಲಿಸಿಕೊಂಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ ಎಂದು ಅವರು ಹೇಳಿದ್ದಾರೆ.
ಯುವತಿಯ ಕುಟುಂಬದ ಸದಸ್ಯರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಬಲರಾಮ್ ಸಿಂಗ್ ತಿಳಿಸಿದ್ದಾರೆ.