ಸಣ್ಣ ವೈವಾಹಿಕ ಸಮಸ್ಯೆಗೆ ಲವ್ ಜಿಹಾದ್ ಬಣ್ಣ ನೀಡಿದ ಸಂಘಟನೆಗಳು: ಮಹಿಳೆಯಿಂದ ನ್ಯಾಯಾಲಯಕ್ಕೆ ಮೊರೆ
ಹೊಸದಿಲ್ಲಿ: ಗುಜರಾತ್ ಸರಕಾರ ಜಾರಿಗೊಳಿಸಿರುವ, ಲವ್ ಜಿಹಾದ್ ಕಾನೂನು ಎಂದೇ ಸಾಮಾನ್ಯವಾಗಿ ಕರೆಯಲಾಗುವ ಮತಾಂತರ ತಡೆ ಕಾಯಿದೆಯನ್ನು ಸ್ವಇಚ್ಛೆಯಿಂದ ಅಂತರ-ಧರ್ಮೀಯ ವಿವಾಹವಾದ ದಂಪತಿಗಳನ್ನೇ ಟಾರ್ಗೆಟ್ ಮಾಡಲು ಪೊಲೀಸರು ಹಾಗೂ ಕೆಲ ಸಂಘಟನೆಗಳು ಬಳಸಿಕೊಂಡಿವೆ ಎಂಬುದನ್ನು ಮುಸ್ಲಿಂ ವ್ಯಕ್ತಿಯನ್ನು ವಿವಾಹವಾದ ಹಿಂದು ಮಹಿಳೆಯೊಬ್ಬಳು ನೀಡಿದ ಸಾಕ್ಷ್ಯ ಪುಷ್ಠೀಕರಿಸುತ್ತಿದೆ. ಈ ಮಹಿಳೆಯ ಪತಿ ಜೈಲಿನಲ್ಲಿದ್ದಾರೆ.
ಈ ಮಹಿಳೆಯ ದೂರಿನ ಆಧಾರದಲ್ಲಿಯೇ ಬಿಹಾರದ ಧಾರ್ಮಿಕ ಸ್ವಾತಂತ್ರ್ಯ(ತಿದ್ದುಪಡಿ( ಕಾಯಿದೆ 2021) ಅನ್ವಯ ಈ ವರ್ಷದ ಜೂನ್ ತಿಂಗಳಲ್ಲಿ ದಾಖಲಾದ ಮೊದಲ ಪ್ರಕರಣ ದಾಖಲಾಗಿತ್ತು. ವಡೋದರ ಪೊಲೀಸರು ದಾಖಲಿಸಿರುವ ಎಫ್ಐಆರ್ನಲ್ಲಿನ ವಿಚಾರಗಳು ನಿಜವಲ್ಲ ಎಂದು ಈ ಮಹಿಳೆ ನ್ಯಾಯಾಲಯಕ್ಕೆ ಹೇಳಿದ್ದಾಳೆ.
ಎಫ್ಐಆರ್ನಲ್ಲಿ ಲೈಂಗಿಕ ಹಲ್ಲೆ, ಬಲವಂತದ ಗರ್ಭಪಾತ, ಕೌಟುಂಬಿಕ ಹಿಂಸೆ ಹಾಗು ಜಾತಿ ನಿಂದನೆ ಸಹಿತ ಹಲವು ಆರೋಪಗಳನ್ನು ಉಲ್ಲೇಖಿಸಲಾಗಿದೆಯಾದರೂ ತಾನು ಇಂತಹ ಆರೋಪಗಳನ್ನು ಮಾಡಿಲ್ಲ ಎಂದು ಮಹಿಳೆ ನ್ಯಾಯಾಲಯಕ್ಕೆ ತಿಳಿಸಿದ್ದಾಳೆ.
ಒಂದು ಕ್ಷುಲ್ಲಕ ವೈವಾಹಿಕ ಸಮಸ್ಯೆಯನ್ನು ಮುಂದಿಟ್ಟುಕೊಂಡು ತಾನು ವಡೋದರಾದ ಗೋತ್ರಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದಾಗಿ ಈ ಪ್ರಕರಣವನ್ನು ಐಪಿಸಿ ಸೆಕ್ಷನ್ 498ಎ ಅನ್ವಯ ದಾಖಲಿಸಬಹುದಾಗಿತ್ತು, ಆದರೆ ಕೆಲ ಸಂಘಟನೆಗಳು ಮಧ್ಯ ಪ್ರವೇಶಿಸಿ ಇದಕ್ಕೆ ಮತೀಯ ಹಾಗೂ ಲವ್ ಜಿಹಾದ್ ಬಣ್ಣ ದೊರೆಯುಂತಾಯಿತು ಎಂದು ಮಹಿಳೆ ಮತ್ತಾಕೆಯ ಪತಿ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದ್ದಾರೆ.
ಆದರೆ ಎಫ್ಐಆರ್ ನಲ್ಲಿ ಅತ್ಯಾಚಾರ ಆರೋಪ ಕೂಡ ಉಲ್ಲೇಖಿಸಿರುವುದ ಆಘಾತ ಮೂಡಿಸಿದೆ, ತಾನು ಬಲವಂತದ ಮತಾಂತರವಾಗಿಲ್ಲ ಎಂದು ಮಹಿಳೆ ತನ್ನ ಅರ್ಜಿಯಲ್ಲಿ ಹೇಳಿದ್ದಾರೆ.
ತಾವಿಬ್ಬರೂ ಪ್ರೀತಿಸಿ ನಂತರ ಇಸ್ಲಾಮಿಕ್ ಧರ್ಮಾನುಸಾರ ಫೆಬ್ರವರಿ 16, 2021ರಂದು ವಿವಾಹವಾಗಿದ್ದಾಗಿಯೂ ದಂಪತಿ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದಾರೆ.
ಈ ಪ್ರಕರಣ ಸಂಬಂಧ ಮಹಿಳೆಯ ಪತಿ, ಆತನ ಮನೆಯವರು, ಮದುವೆ ನಡೆಸಿಕೊಟ್ಟ ಖಾಝಿ ಸಹಿತ ಏಳು ಮಂದಿ ಜೈಲಿನಲ್ಲಿದ್ದಾರೆ.