ಮಹಾರಾಷ್ಟ್ರ: ಎಂಟು ತಿಂಗಳಲ್ಲಿ ಕನಿಷ್ಠ ಮಟ್ಟಕ್ಕೆ ಕೋವಿಡ್ ಸೋಂಕು
ಮುಂಬೈ : ಮಹಾರಾಷ್ಟ್ರದಲ್ಲಿ ಸೋಮವಾರ 2026 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಇದು ಎಂಟು ತಿಂಗಳಲ್ಲೇ ಕನಿಷ್ಠ ಸಂಖ್ಯೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಇದುವರೆಗೆ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ 65,62,514ಕ್ಕೇರಿದೆ.
ಫೆ.2ರಂದು ರಾಜ್ಯದಲ್ಲಿ 1927 ಪ್ರಕರಣಗಳು ದಾಖಲಾದ ಬಳಿಕ ಸೋಮವಾರ ದಾಖಲಾದ ಸಂಖ್ಯೆ ಇದುವರೆಗಿನ ಕನಿಷ್ಠ. ಸೋಂಕಿನಿಂದ 26 ಮಂದಿ ಮೃತಪಟ್ಟಿದ್ದಾರೆ. ಮುಂಬೈನಲ್ಲಿ 339 ಹೊಸ ಪ್ರಕರಣಗಳು ವರದಿಯಾಗಿದ್ದು, ಮಹಾನಗರದಲ್ಲಿ ಇದುವರೆಗಿನ ಒಟ್ಟು ಪ್ರಕರಣಗಳ ಸಂಖ್ಯೆ 7,45,652ಕ್ಕೇರಿದೆ.
ರವಿವಾರ ಕಡಿಮೆ ಪರೀಕ್ಷೆಗಳು ನಡೆದಿರುವುದು ಪ್ರಕರಣಗಳ ಇಳಿಕೆಗೆ ಕಾರಣ ಎನ್ನಲಾಗುತ್ತಿದೆ. ಆದರೆ ರಾಜ್ಯದಲ್ಲಿ ಸೋಂಕು ಇಳಿಮುಖವಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 115450 ಮಾದರಿಗಳ ಪರೀಕ್ಷೆ ನಡೆದಿದ್ದು, ಪಾಸಿಟಿವಿಟಿ ದರ ಶೇಕಡ 1.75ರಷ್ಟಿದೆ.
ಸೋಮವಾರ ರಾಜ್ಯದಲ್ಲಿ 5389 ಮಂದಿ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 33637ಕ್ಕೆ ಇಳಿದಿದೆ. ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಶೇಕಡ 69ರಷ್ಟು ಪ್ರಕರಣಗಳು ಪುಣೆ, ಮುಂಬೈ, ಅಹ್ಮದ್ನಗರ ಮತ್ತು ಥಾಣೆ ಜಿಲ್ಲೆಗಳಲ್ಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪುಣೆಯಲ್ಲಿ 8839 (26.27%), ಮುಂಬೈ 6198 (18.42%), ಅಹ್ಮದ್ ನಗರ 4162 (1237%) ಮತ್ತು ಥಾಣೆಯಲ್ಲಿ 3348 (11.43%) ಸಕ್ರಿಯ ಪ್ರಕರಣಗಳು ಇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.