ಡ್ರಗ್ಸ್ ಪ್ರಕರಣ: ನಟಿ ಅನನ್ಯಾ ಪಾಂಡೆಯ ಮೊಬೈಲ್, ಲ್ಯಾಪ್ಟಾಪ್ ಎನ್ಸಿಬಿ ವಶಕ್ಕೆ
photo:The Tribune
ಮುಂಬೈ,ಅ.21: ಬಾಲಿವುಡ್ ನಟಿ ಅನನ್ಯಾ ಪಾಂಡೆಯವರ ಇಲ್ಲಿಯ ನಿವಾಸದ ಮೇಲೆ ದಾಳಿ ನಡೆಸಿರುವ ಮಾದಕ ದ್ರವ್ಯ ನಿಯಂತ್ರಣ ಘಟಕವು ಅವರ ಲ್ಯಾಪ್ಟಾಪ್ ಮತ್ತು ಮೊಬೈಲ್ ಪೋನ್ ವಶಪಡಿಸಿಕೊಂಡಿದೆ. ನಟ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಮತ್ತು ಇತರರು ಬಂಧಿತರಾಗಿರುವ ಐಷಾರಾಮಿ ಹಡಗಿನಲ್ಲಿ ಮಾದಕದ್ರವ್ಯಗಳ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎನ್ನಲಾಗಿದೆ.
ಸಮನ್ಸ್ನ ಮೇರೆಗೆ ಅನನ್ಯಾ ತನ್ನ ತಂದೆ ನಟ ಚಂಕಿ ಪಾಂಡೆಯವರೊಂದಿಗೆ ವಿಚಾರಣೆಗಾಗಿ ಎನ್ಸಿಬಿ ಕಚೇರಿಗೆ ತೆರಳಿದರು.2019ರಲ್ಲಿ ಚಿತ್ರರಂಗಕ್ಕೆ ಕಾಲಿರಿಸಿದ್ದ 22ರ ಹರೆಯದ ಅನನ್ಯಾ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.
ಮಾದಕದ್ರವ್ಯ ಪ್ರಕರಣದಲ್ಲಿ ಆರ್ಯನ್ ಖಾನ್,ಅವರ ಸ್ನೇಹಿತ ಅರ್ಬಾಝ್ ಮರ್ಚಂಟ್ ಮತ್ತು ಇತರ ಐವರನ್ನು ಎನ್ಸಿಬಿ ಅಧಿಕಾರಿಗಳು ಬಂಧಿಸಿದ್ದು,ಆರೋಪಿಯೋರ್ವ ವಾಟ್ಸ್ಆ್ಯಪ್ ಚಾಟ್ನಲ್ಲಿ ಅನನ್ಯಾ ಹೆಸರು ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಅನನ್ಯಾ ಮತ್ತು ಆರ್ಯನ್ ಸ್ಟಾರ್ ನಟರ ಮಕ್ಕಳನ್ನು ಒಳಗೊಂಡಿರುವ ಮೈತ್ರಿಕೂಟದ ಭಾಗವಾಗಿದ್ದು,ಅನನ್ಯಾ ಮತ್ತು ಆರ್ಯನ್ ಸೋದರಿ ಸುಹಾನಾ ಆಪ್ತ ಸ್ನೇಹಿತೆಯರಾಗಿದ್ದಾರೆ.