2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 300 ಸ್ಥಾನಗಳನ್ನು ಗೆಲ್ಲುವುದು ಕಷ್ಟ: ಗುಲಾಂ ನಬಿ ಆಝಾದ್

ಗುಲಾಂ ನಬಿ ಆಝಾದ್(photo:PTI)
ಶ್ರೀನಗರ,ಡಿ.2: ಮುಂದಿನ ಲೋಕಸಭಾ ಚುನಾವಣೆಯಲ್ಲಿ ತನ್ನ ಪಕ್ಷವು 300 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ತನಗೆ ಕಂಡು ಬರುತ್ತಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಹೇಳಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಭಾರತೀಯ ಸಂವಿಧಾನದ ವಿಧಿಯನ್ನು ಮರುಸ್ಥಾಪಿಸುವ ಸ್ಥಿತಿಯಲ್ಲಿ ಕಾಂಗ್ರೆಸ್ ಬಹುಶಃ ಇರಲಿಕ್ಕಿಲ್ಲ ಎಂಬ ಸುಳಿವನ್ನೂ ಅವರು ನೀಡಿದರು.
ಬುಧವಾರ ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ಆಝಾದ್, 2024ರ ಚುನಾವಣೆಯಲ್ಲಿ ಕಾಂಗ್ರೆಸ್ 300 ಸ್ಥಾನಗಳನ್ನು ಗೆಲ್ಲುತ್ತದೆ ಮತ್ತು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಮರಳಿಸುತ್ತದೆ ಎಂದು ತಾನು ಭರವಸೆ ನೀಡಲು ಸಾಧ್ಯವಿಲ್ಲ. ಕಾಂಗ್ರೆಸ್ 300 ಸ್ಥಾನಗಳನ್ನು ಗೆಲ್ಲಲಿ ಎಂದು ತಾನು ಪ್ರಾರ್ಥಿಸುತ್ತೇನೆ,ಆದರೆ ಅದು ಸಂಭವಿಸುವುದು ಸದ್ಯಕ್ಕೆ ಕಂಡು ಬರುತ್ತಿಲ್ಲ ಎಂದು ಹೇಳಿದರು.
ತಾನು ಕಳೆದ ಮೂರು ವರ್ಷಗಳಿಂದಲೂ ಸಂಸತ್ತಿಲ್ಲಿ 370ನೇ ವಿಧಿಯ ಬಗ್ಗೆ ಮಾತನಾಡುತ್ತಿದ್ದೇನೆ. ವಿಷಯವು ಈಗ ನ್ಯಾಯಾಲಯದಲ್ಲಿದೆ ಎಂದ ಅವರು,‘ಯಾವುದೇ ವಿಷಯವು ನಮ್ಮ ಕೈಗಳಲ್ಲಿ ಇಲ್ಲದಿದ್ದರೆ,ಕೇವಲ ಜನರನ್ನು ಸಂತೋಷಗೊಳಿಸಲು ನಾನು ಮಾತನಾಡುವುದಿಲ್ಲ ’ಎಂದರು.
ಸರ್ವೋಚ್ಚ ನ್ಯಾಯಾಲಯ ಮತ್ತು ಆಡಳಿತ ಸರಕಾರ ಮಾತ್ರ 370ನೇ ವಿಧಿಯ ವಿಷಯದಲ್ಲಿ ನಿರ್ಧಾರವನ್ನು ಕೈಗೊಳ್ಳಬಹುದು ಎಂದೂ ಅವರು ಹೇಳಿದರು.
ಜಮ್ಮು-ಕಾಶ್ಮೀರದಲ್ಲಿಯ ರಾಜಕೀಯ ಪಕ್ಷಗಳು 370ನೇ ವಿಧಿಯ ಮರುಸ್ಥಾಪನೆಗೆ ಆಗ್ರಹಿಸುತ್ತಲೇ ಇವೆ. ಚಳಿಗಾಲದ ಅಧಿವೇಶನದ ಮೊದಲ ದಿನವಾಗಿದ್ದ ಸೋಮವಾರ ಎನ್ಸಿ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಸೇರಿದಂತೆ ಪಕ್ಷದ ಸಂಸದರು ತಮ್ಮ ಬೇಡಿಕೆಯ ಈಡೇರಿಕೆಗೆ ಆಗ್ರಹಿಸಲು ಸಂಸತ್ತಿನ ಹೊರಗೆ ಧರಣಿ ಕುಳಿತಿದ್ದರು.
ಈ ನಡುವೆ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನದ ಮರುಸ್ಥಾಪನೆಗಾಗಿ ಹೋರಾಡಲು ಕಾಂಗ್ರೆಸ್ ಸಿದ್ಧವಿಲ್ಲ ಎಂದು ಹೇಳಿದ್ದಾರೆ.







