1,000 ಅಡಿ ಎತ್ತರದ ಪರ್ವತದಲ್ಲಿ ಎರಡು ದಿನ ಸಿಲುಕಿದ್ದ ಯುವಕನ ರಕ್ಷಣೆಯ ವಿಡಿಯೋಗಳು ವೈರಲ್

Photo: PTI
ಹೊಸದಿಲ್ಲಿ: ಕೇರಳದ ಮಲಂಪುಝ ಎಂಬಲ್ಲಿನ ಚೆರಡು ಗ್ರಾಮದ ಸಮೀಪವಿರುವ 1,000 ಅಡಿ ಎತ್ತರದ ಕುರುಂಬಚಿ ಪರ್ವತದಲ್ಲಿ ಎರಡು ದಿನ ಸಿಲುಕಿದ್ದ ಕೇರಳದ 23 ವರ್ಷದ ಚಾರಣಿಗನನ್ನು ಭಾರತೀಯ ಸೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವು ರಕ್ಷಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಗ್ಗದ ಸಹಾಯದಿಂದ ಚಾರಣಿಗ ಚೆರತ್ತಿಲ್ ಬಾಬು ಎಂಬಾತನನ್ನು ರಕ್ಷಿಸಲಾಗಿತ್ತು. ಛಾಯಾಗ್ರಾಹಕ ಮತ್ತು ಡ್ರೋನ್ ಸರ್ವಿಸ್ ಆಪರೇಟರ್ ಸೂರಜ್ ಪಿ ನಾಥ್ ಈ ಸಂದರ್ಭ ಸೇನಾ ಸಿಬ್ಬಂದಿಗೆ ಮಾರ್ಗದರ್ಶನ ನೀಡಿದ್ದರಲ್ಲದೆ ಆ ರಕ್ಷಣೆಯ ಸಂದರ್ಭದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು ಅದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಡ್ರೋನ್ ಮೂಲಕ ತೆಗೆಯಲಾದ ವೀಡಿಯೋದಲ್ಲಿ ರಕ್ಷಣಾ ಸಿಬ್ಬಂದಿ ಯುವಕನಿಗೆ ನೀರಿನ ಬಾಟಲಿ ನೀಡುತ್ತಿರುವುದು ಮತ್ತು ಆತನ ತಲೆಯನ್ನು ಮೆಲ್ಲನೆ ತಟ್ಟಿ ನಾವಿದ್ದೇವೆ ಎಂಬ ಅಭಯ ನೀಡಿರುವ ದೃಶ್ಯ ಸೆರೆಯಾಗಿದೆ. ಬಾಬುವನ್ನು ರಕ್ಷಿಸಿ ಬೆಟ್ಟದ ತುದಿಗೆ ಕರೆದುಕೊಂಡು ಹೋದಾಗ ಆತ ತನ್ನನ್ನು ರಕ್ಷಿಸಿದವರೆಲ್ಲರಿಗೂ ಮುತ್ತು ನೀಡುವ ಮೂಲಕ ಅಭಿನಂದನೆ ಸೂಚಿಸಿದ್ದ.
ಆತನನ್ನು ನಂತರ ಹೆಲಿಕಾಪ್ಟರ್ನಲ್ಲಿ ಏರ್ಲಿಫ್ಟ್ ಮಾಡಿ ಪಾಲಕ್ಕಾಡ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಈ ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಲೆಫ್ಟಿನೆಂಟ್ ಕರ್ನಲ್ ಹೇಮಂತ್ ರಾಜ್ ಅವರಿಗೆ ಧನ್ಯವಾದ ತಿಳಿಸಿರುವ ಛಾಯಾಗ್ರಾಹಕ ಸೂರಜ್, ರಕ್ಷಣಾ ಕಾರ್ಯಾಚರಣೆಯ ಹಲವು ಇತರ ವೀಡಿಯೋಗಳನ್ನೂ ಶೇರ್ ಮಾಡಿದ್ದಾರೆ.







