ಪೋಲ್ಯಾಂಡ್, ಬಲ್ಗೇರಿಯಾಕ್ಕೆ ರಶ್ಯದ ಅನಿಲ ಪೂರೈಕೆ ಸ್ಥಗಿತ
ಮಾಸ್ಕೊ, ಎ.27: ರಶ್ಯವು ಉಕ್ರೇನ್ ಮೇಲಿನ ರಶ್ಯದ ಆಕ್ರಮಣವನ್ನು ಕಟುವಾಗಿ ವಿರೋಧಿಸುತ್ತಾ ಬಂದಿರುವ ಪೋಲ್ಯಾಂಡ್ ಮತ್ತು ಬಲ್ಗೇರಿಯಾಕ್ಕೆ ಅನಿಲ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ರಶ್ಯ ಬುಧವಾರ ಹೇಳಿದೆ.
ಉಕ್ರೇನ್ ಮೇಲಿನ ಆಕ್ರಮಣದ ಹಿನ್ನೆಲೆಯಲ್ಲಿ ತನ್ನನ್ನು ವಿರೋಧಿಸುವವರ ವಿರುದ್ಧ ಅನಿಲವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವ ರಶ್ಯದ ಬೃಹತ್ ಇಂಧನ ಸಂಸ್ಥೆ ಗಾರ್ಪ್ರೋಮ್, ಬುಧವಾರದಿಂದ ಪೋಲ್ಯಾಂಡ್ ಮತ್ತು ಬಲ್ಗೇರಿಯಾಕ್ಕೆ ಅನಿಲ ಪೂರೈಸುವುದಿಲ್ಲ ಎಂದು ಹೇಳಿದೆ.
ಉಕ್ರೇನ್ ನೆರೆರಾಷ್ಟ್ರ ಮೊಲ್ದೋವಾದಲ್ಲಿ ಸರಣಿ ಸ್ಫೋಟ ಸಂಭವಿಸಿದ ಬಳಿಕ ಹೇಳಿಕೆ ನೀಡಿದ್ದ ಉಕ್ರೇನ್, ರಶ್ಯವು ಯುದ್ಧವನ್ನು ಯುರೋಪ್ ಗೆ ವಿಸ್ತರಿಸಲು ಬಯಸುತ್ತಿದೆ ಎಂದು ಹೇಳಿತ್ತು. ಮೊಲ್ದೋವಾದ ಟ್ರಾನ್ಸ್ನಿಸ್ಟ್ರಿಯಾ ಪ್ರದೇಶದಲ್ಲಿ ರಶ್ಯನ್ ಭಾಷೆ ಮಾತನಾಡುವವರನ್ನು ದಮನಿಸಲಾಗುತ್ತಿದೆ ಎಂದು ರಶ್ಯದ ಸೇನಾ ಮುಖಂಡರು ಹೇಳಿಕೆ ನೀಡಿದ ಬೆನ್ನಲ್ಲೇ ಮೊಲ್ಡೋವಾದ ರೇಡಿಯೊ ಟವರ್, ಸೇನಾ ನೆಲೆ ಮತ್ತು ಭದ್ರತಾ ಇಲಾಖೆಯ ಕಚೇರಿಯನ್ನು ಗುರಿಯಾಗಿಸಿ ಸರಣಿ ಸ್ಫೋಟ ಸಂಭವಿಸಿತ್ತು. ಇದು ಮೊಲ್ಡೋವಾದ ಮೇಲಿನ ದಾಳಿಯ ಮುನ್ಸೂಚನೆಯಾಗಿದೆ. ಯುದ್ಧವನ್ನು ಯುರೋಪ್ ನತ್ತ ವಿಸ್ತರಿಸಲು ರಶ್ಯ ಉದ್ದೇಶಿಸಿದೆ. ಟ್ರಾನ್ಸ್ನಿಸ್ಟ್ರಿಯಾದಲ್ಲಿ ಅಸ್ಥಿರತೆ ತರಲು ರಶ್ಯ ಪ್ರಯತ್ನಿಸುತ್ತಿದೆ . ಉಕ್ರೇನ್ ಕೈವಶವಾದರೆ ಮರುದಿನವವೇ ರಶ್ಯದ ಸೇನೆ ಮೋಲ್ದೋವ ರಾಜಧಾನಿಯ ಬಾಗಿಲಲ್ಲಿ ಇರುತ್ತದೆ ಎಂದು ಉಕ್ರೇನ್ ಅಧ್ಯಕ್ಷರ ಸಲಹೆಗಾರ ಮಿಖಾಯ್ಲೋ ಪೊಡೊಲ್ಯಾಕ್ ಟ್ವೀಟ್ ಮಾಡಿದ್ದಾರೆ.
ಮೊಲ್ಡೋವಾದಲ್ಲಿ ಸಂಭವಿಸಿದ ಸ್ಫೋಟಕ್ಕೆ ರಶ್ಯ ಹೊಣೆ ಎಂದು ಆರೋಪಿಸಿರುವ ಅಮೆರಿಕ, ಮೋಲ್ಡೊವಾದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿದೆ.