ದೇಶದಲ್ಲಿ ಕೋವಿಡ್ ಸೋಂಕು ಶೇಕಡ 41ರಷ್ಟು ಹೆಚ್ಚಳ
ಹೊಸದಿಲ್ಲಿ: ದೇಶದಲ್ಲಿ ಕಳೆದ ಒಂದು ವಾರ ದಾಖಲಾದ ಹೊಸ ಕೋವಿಡ್-19 ಪ್ರಕರಣಗಳ ಸಂಖ್ಯೆ, ಈ ಹಿಂದಿನ ವಾರ ದಾಖಲಾದ ಪ್ರಕರಣಗಳ ಸಂಖ್ಯೆಗಿಂತ ಶೇಕಡ 41ರಷ್ಟು ಅಧಿಕವಾಗಿದೆ. ಆದರೆ ರವಿವಾರ ಮುಕ್ತಾಯವಾದ ಒಂದು ವಾರದ ಅವಧಿಯಲ್ಲಿ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿಲ್ಲ.
ದೇಶದಲ್ಲಿ ಎ. 25ರಿಂದ ಮೇ 1ರವರೆಗೆ 22 ಸಾವಿರ ಹೊಸ ಪ್ರಕರಣಗಳು ವರದಿಯಾಗಿದ್ದು, ಇದು ಹಿಂದಿನ ವಾರ ದಾಖಲಾದ ಪ್ರಕರಣಗಳಿಗೆ (15,800) ಹೋಲಿಸಿದರೆ ಶೇಕಡ 41ರಷ್ಟು ಅಧಿಕ. ಹಿಂದಿನ ವಾರ ಪ್ರಕರಣಗಳ ಸಂಖ್ಯೆ ಶೇಕಡ 96ರಷ್ಟು ಹೆಚ್ಚಿತ್ತು. ಎಲ್ಲ ಹೊಸ ಪ್ರಕರಣಗಳ ಪೈಕಿ ದೆಹಲಿ ಹಾಗೂ ಹರ್ಯಾಣ ಶೇಕಡ 68ರಷ್ಟು ಪಾಲು ಹೊಂದಿವೆ.
ಮಹತ್ವದ ಅಂಶವೆಂದರೆ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ. ಒಂದು ವಾರದ ಅವಧಿಯಲ್ಲಿ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ ಸುಮಾರು 30 ಆಗಿದ್ದು, ಕಳೆದ ವಾರ 29 ಹಾಗೂ ಅದಕ್ಕೂ ಹಿಂದಿನ ವಾರ 27 ಮಂದಿ ಸೋಂಕಿತರು ಸಾವನ್ನಪ್ಪಿದ್ದರು.
ದೇಶದ 20 ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಿರುವುದು, ಸೋಂಕು ದೇಶಾದ್ಯಂತ ಮತ್ತೆ ಹರಡುತ್ತಿದೆ ಎನ್ನುವುದರ ಸೂಚಕವಾಗಿದೆ. ಆದರೆ ಬಹುತೇಕ ಎಲ್ಲ ರಾಜ್ಯಗಳಲ್ಲಿ ಒಂದು ವಾರದ ಅವಧಿಯಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 1000ಕ್ಕಿಂತ ಕಡಿಮೆ. ದೆಹಲಿಯಲ್ಲಿ ಒಂದು ವಾರದ ಅವಧಿಯಲ್ಲಿ 9684 ಪ್ರಕರಣಗಳು ವರದಿಯಾಗಿದ್ದು, ಇದು ಹಿದಿನ ವಾರದ ಪ್ರಮಾಣಕ್ಕಿಂತ ಶೇಕಡ 53ರಷ್ಟು ಅಧಿಕ.