ಪೊಲೀಸ್ ಗುಪ್ತಚರ ಕೇಂದ್ರ ಕಚೇರಿ ಮೇಲೆ ಆರ್ಪಿಜಿ ದಾಳಿ
ಮೊಹಾಲಿ: ಇಲ್ಲಿನ ಪೊಲೀಸ್ ಗುಪ್ತಚರ ಕೇಂದ್ರ ಕಚೇರಿ ಮೇಲೆ ರಾಕೆಟ್ ಪ್ರೊಪೆಲ್ಡ್ ಗ್ರೆನೇಡ್ (ಆರ್ಪಿಜಿ) ದಾಳಿ ನಡೆದಿದ್ದು, ಕಚೇರಿಯ ಕಿಟಕಿ ಗಾಜುಗಳು ಚೂರು ಚೂರಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
"ಸೆಕ್ಟರ್ 77ರಲ್ಲಿರುವ ಪಂಜಾಬ್ ಪೊಲೀಸ್ ಗುಪ್ತಚರ ವಿಭಾಗದ ಕೇಂದ್ರ ಕಚೇರಿಯಲ್ಲಿ ಸ್ಫೋಟವೊಂದು ನಡೆದಿದೆ. ಯಾವುದೇ ಹಾನಿ ಸಂಭವಿಸಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ವಿಧಿವಿಜ್ಞಾನ ತಜ್ಞರನ್ನು ಕರೆಸಲಾಗಿದೆ ಎಂದು ಮೊಹಾಲಿ ಪೊಲೀಸ್ ಪ್ರಕಟಣೆ ಹೇಳಿದೆ.
ಪೊಲೀಸರು ಇಡೀ ಪ್ರದೇಶವನ್ನು ಸುತ್ತುವರಿದಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಸ್ಥಳಕ್ಕೆ ಆಗಮಿಸಿದೆ. ರಾಕೆಟ್ನಂಥ ಸಾಧನದಿಂದ ಸ್ಫೋಟ ಸಂಭಸಿದ್ದು, ಯಾವುದೇ ಜೀವಹಾನಿಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಚಂಡೀಗಢ ಪೊಲೀಸ್ ಇಲಾಖೆಯ ಕ್ಷಿಪ್ರ ಸ್ಪಂದನೆ ತಂಡವನ್ನೂ ಗುಪ್ತಚರ ಕಚೇರಿ ಕಟ್ಟಡದ ಸುತ್ತ ನಿಯೋಜಿಸಲಾಗಿದೆ.
Next Story