ಗೋಧಿ ದಾಸ್ತಾನು ಆರು ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿಯುವ ಅಪಾಯ: ಅಂಕಿ ಅಂಶ
ಹೊಸದಿಲ್ಲಿ: ಕೇಂದ್ರೀಯವಾಗಿ ದಾಸ್ತಾನು ಮಾಡಲಾಗುವ ಗೋಧಿ ಪ್ರಮಾಣ 2022-23ನೇ ಸಾಲಿನಲ್ಲಿ ಕಳೆದ ಆರು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿಯುವ ಅಪಾಯವಿದೆ. ಇದು ಕಳೆದ 13 ವರ್ಷಗಳಲ್ಲಿ ಎರಡನೇ ಕನಿಷ್ಠ ದಾಸ್ತಾನು ಪ್ರಮಾಣ ಎನಿಸಿಕೊಳ್ಳಲಿದೆ.
15 ವರ್ಷಗಳಲ್ಲೇ ಕನಿಷ್ಠ ಪ್ರಮಾಣದ ಆಹಾರಧಾನ್ಯವನು ಸರ್ಕಾರ ಖರೀದಿ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಸಬ್ಸಿಡಿಯುಕ್ತ ಸರಬರಾಜಿನಿಂದ ಹಿಂದಕ್ಕೆ ಪಡೆಯಲಾದ ಮುಕ್ತ ಮಾರುಕಟ್ಟೆ ಮಾರಾಟಕ್ಕೆ ಲಭ್ಯ ಪ್ರಮಾಣ ಕಳೆದ ಎರಡು ವರ್ಷಗಳಲ್ಲಿ ಶೇಕಡ 38ರಷ್ಟು ಅಧಿಕವಾಗಿದೆ ಎಂದು ಅಂಕಿ ಅಂಶಗಳು ಹೇಳುತ್ತವೆ.
ದೇಶದ ಆಹಾರ ಭದ್ರತೆ ಅಪಾಯದ ಹಿನ್ನೆಲೆಯಲ್ಲಿ ಮೇ 13ರಂದು ಸರ್ಕಾರ ಗೋಧಿ ರಫ್ತನ್ನು ನಿಷೇಧಿಸಿತ್ತು. ಆದರೆ ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಸುಗಮವಾಗಿ ನಿರ್ವಹಿಸಲು ಸಾಕಷ್ಟು ದಾಸ್ತಾನು ತಮ್ಮ ಬಳಿ ಇದೆ ಎಂದು ಆಹಾರ ಸಚಿವಾಲಯ ಹೇಳಿಕೊಂಡಿದೆ. ಮಾರ್ಚ್ನಲ್ಲಿ ಸುದೀರ್ಘ ಉಷ್ಣಗಾಳಿಯಿಂದಾಗಿ ಇಳುವರಿ ಕಡಿಮೆಯಾಗಿರುವುದು ಮತ್ತು ದಾಖಲೆ ರಫ್ತಿನಿಂದಾಗಿ ಪಿಡಿಎಸ್ ವ್ಯವಸ್ಥೆಯಡಿ ಬೇಡಿಕೆ-ಸರಬರಾಜು ಪರಿಸ್ಥಿತಿ ಕಠಿಣವಾಗುವ ಎಲ್ಲ ಸಾಧ್ಯತೆಗಳೂ ಇವೆ.
ಗ್ರಾಹಕ ಹಣದುಬ್ಬರ ಹೆಚ್ಚಿದ ಹಿನ್ನೆಲೆಯಲ್ಲಿ ಸರ್ಕಾರದ ರಫ್ತು ನಿಷೇಧ ಮಾಡಿದೆ. ಗ್ರಾಹಕ ಹಣದುಬ್ಬರ ಎಂಟು ವರ್ಷಗಳಲ್ಲೇ ಗರಿಷ್ಠ ಮಟ್ಟವನ್ನು ತಲುಪಿ 7.79% ಆಗಿದ್ದರೆ, ಆಹಾರ ಹಣದುಬ್ಬರ 8.38% ಆಗಿದೆ. ಸಾಮಾನ್ಯ ಹಣದುಬ್ಬರ ಶೇಕಡ 6ರ ಸನಿಹದಲ್ಲಿದೆ.
2022-23ನೇ ವರ್ಷಕ್ಕೆ ಸರ್ಕಾರ ಫೆಬ್ರುವರಿಯಲ್ಲಿ ದಾಖಲೆ 111.30 ದಶಲಕ್ಷ ಟನ್ ಉತ್ಪಾದನೆ ನಿರೀಕ್ಷಿಸಿತ್ತು. ಆದರೆ ಹಲವು ರಾಜ್ಯಗಳಲ್ಲಿ ಬಿಸಿಲಿನ ಝಳದಿಂದಾಗಿ ನಿರೀಕ್ಷಿತ ಉತ್ಪಾದನೆಯನ್ನು ಶೇಕಡ 5.7ರಷ್ಟು ಕಡಿತಗೊಳಿಸಿ 105 ದಶಲಕ್ಷ ಟನ್ಗಳಿಗೆ ಇಳಿಸಲಾಗಿತ್ತು. ಜತೆಗೆ ಕಡಿಮೆ ಪ್ರಮಾಣದ ಗೋಧಿಯನ್ನು ಖರೀದಿಸಲಿದ್ದು, ಉದ್ದೇಶಿತ 44 ದಶಲಕ್ಷ ಟನ್ ಬದಲಾಗಿ 19.5 ದಶಲಕ್ಷ ಟನ್ ಖರೀದಿಸಲಿದೆ ಎಂದು ಹೇಳಲಾಗಿದೆ.