ಸಚಿವನ ಪುತ್ರನ ವಿರುದ್ಧ ಅತ್ಯಾಚಾರದ ದೂರು ನೀಡಿದ್ದ ಯುವತಿ ಮೇಲೆ ಮಸಿ ದಾಳಿ
ಹೊಸದಿಲ್ಲಿ: ರಾಜಸ್ಥಾನದ ಸಚಿವ ಮಹೇಶ್ ಜೋಶಿ ಅವರ ಪುತ್ರ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿರುವ 23 ವರ್ಷದ ಮಹಿಳೆಯ ಮೇಲೆ ದಿಲ್ಲಿಯಲ್ಲಿ ದುಷ್ಕರ್ಮಿಗಳು ಮಸಿ ಬಳಿದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶನಿವಾರ ರಾತ್ರಿ ಕೆಲವು ದುಷ್ಕರ್ಮಿಗಳು ಮಹಿಳೆಯ ಮೇಲೆ ಏನನ್ನೋ ಎಸೆದು ಪರಾರಿಯಾಗಿದ್ದಾರೆ ಎಂದು ಮಾಹಿತಿ ಬಂದಿದೆ ಎಂದು ಉಪ ಪೊಲೀಸ್ ಆಯುಕ್ತ (ಆಗ್ನೇಯ ಜಿಲ್ಲೆ) ಇಶಾ ಪಾಂಡೆ ತಿಳಿಸಿದ್ದಾರೆ. ದಾಳಿಯ ನಂತರ ಮಹಿಳೆಯನ್ನು ತಕ್ಷಣವೇ ಏಮ್ಸ್ ಟ್ರಾಮಾ ಸೆಂಟರ್ಗೆ ಕರೆದೊಯ್ಯಲಾಯಿತು ಎಂದು ಅವರು ತಿಳಿಸಿದ್ದಾರೆ.
ರಾತ್ರಿ 9.30 ರ ಸುಮಾರಿಗೆ ಕಾಳಿಂದಿ ಕುಂಜ್ ರಸ್ತೆಯ ಬಳಿ ತನ್ನ ತಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಇಬ್ಬರು ಹುಡುಗರು ತನ್ನ ಮೇಲೆ ಏನನ್ನೋ ಎಸೆದು ಓಡಿಹೋಗಿದ್ದಾರೆ ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ.
ನೀಲಿ ಬಣ್ಣದ ದ್ರವವು ಶಾಯಿಯಂತೆ ಕಾಣುತ್ತದೆ ಎಂದು ಡಿಸಿಪಿ ಪಾಂಡೆ ಹೇಳಿದ್ದಾರೆ.
ಸಂತ್ರಸ್ತೆಯ ಹೇಳಿಕೆಯನ್ನು ಆಧರಿಸಿ, ಪೊಲೀಸರು ಶಾಹೀನ್ ಬಾಗ್ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 195 ಎ, 506, 323 ಮತ್ತು 34 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಸಂತ್ರಸ್ತೆ ರಾಜಸ್ಥಾನದ ಸಂಪುಟ ಸಚಿವ ಮಹೇಶ್ ಜೋಶಿ ಅವರ ಪುತ್ರ ರೋಹಿತ್ ಜೋಶಿ ವಿರುದ್ಧ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ದೂರು ದಾಖಲಿಸಿದ್ದರು.
ಡಿಸಿಪಿ (ಉತ್ತರ) ಸಾಗರ್ ಸಿಂಗ್ ಕಲ್ಸಿ ಮಾತನಾಡಿ, ರೋಹಿತ್ ಜೋಶಿ 2020 ರಲ್ಲಿ ಫೇಸ್ಬುಕ್ ಮೂಲಕ ತನ್ನೊಂದಿಗೆ ಸಂಪರ್ಕಕ್ಕೆ ಬಂದಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಅವರು ಜನವರಿ 8, 2021 ರಂದು ಆಕೆಯನ್ನು ಸವಾಯಿ ಮಾಧೋಪುರಕ್ಕೆ ಕರೆದೊಯ್ದು, ಆಕೆಯ ಒಪ್ಪಿಗೆಯಿಲ್ಲದೆ ಮಾದಕ ದ್ರವ್ಯಗಳನ್ನು ನೀಡಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ ಎಂದಿದ್ದಾರೆ.