ಟೀಸ್ಟಾ ಸೆಟಲ್ವಾಡ್ ಬಿಡುಗಡೆಗೆ ಜೆಎನ್ಯು ಅಧ್ಯಾಪಕರ ಸಂಘಟನೆ ಆಗ್ರಹ
ಹೊಸದಿಲ್ಲಿ, ಜೂ. 27: ಗುಜರಾತ್ ಗಲಭೆ ಪ್ರಕರಣದಲ್ಲಿ ತಪ್ಪು ಪುರಾವೆ ಸಲ್ಲಿಸಿದ ಆರೋಪದಲ್ಲಿ ಗುಜರಾತ್ ಎಟಿಎಸ್ನಿಂದ ಬಂಧಿತರಾಗಿರುವ ಸಾಮಾಜಿಕ ಹೋರಾಟಗಾರ್ತಿ ಟೀಸ್ಟಾ ಸೆಟಲ್ವಾಡ್ ಅವರನ್ನು ಬಿಡುಗಡೆ ಮಾಡುವಂತೆ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಅಧ್ಯಾಪಕರ ಸಂಘಟನೆ (ಜೆಎನ್ಯುಟಿಎ) ಆಗ್ರಹಿಸಿದೆ.
ರವಿವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಜೆಎನ್ಯುಟಿಎ, ಟೀಸ್ಟಾ ಸೆಟಲ್ವಾಡ್ ಅವರಿಗೆ ಬೆಂಬಲವಾಗಿ ನಿಲ್ಲುವಂತೆ ಜನರಲ್ಲಿ ಆಗ್ರಹಿಸಿದ್ದಾರೆ.
ಎಲ್ಲ ರೀತಿಯ ನಿರಂಕುಶ ದಬ್ಬಾಳಿಕೆಯ ವಿರುದ್ಧ ಭಾರತದ ಪ್ರಜಾಸತ್ತಾತ್ಮಕ ರಾಜಕೀಯದ ಮೌಲ್ಯವನ್ನು ಎತ್ತಿ ಹಿಡಿದಿರುವುದಕ್ಕಾಗಿ ಕಿರುಕುಳಕ್ಕೆ ಒಳಗಾದ ಟೀಸ್ಟಾ ಸೆಟಲ್ವಾಡ್ ಹಾಗೂ ಇತರ ಎಲ್ಲರೊಂದಿಗೆ ಜೆಎನ್ಯುಟಿಎ ತನ್ನ ಐಕಮತ್ಯ ವ್ಯಕ್ತಪಡಿಸಿದೆ.
ಗುಜರಾತ್ ಹಿಂಸಾಚಾರದ ಸಂತ್ರಸ್ತರನ್ನು ಬೆಂಬಲಿಸಿದವರ ವಿರುದ್ಧ ದಾಖಲಿಸಲಾದ ಎಫ್ಐಆರ್ಗಳನ್ನು ಹಿಂಪಡೆಯಬೇಕು ಹಾಗೂ ಈ ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾದ ಟೀಸ್ಟಾ ಸೆಟಲ್ವಾಡ್ ಹಾಗೂ ಇತರರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಜೆಎನ್ಯುಟಿ ಆಗ್ರಹಿಸಿದೆ.