ಬಾಲಕಿಯರ ಮುಂದೆ ನಗ್ನತೆ ಪ್ರದರ್ಶಿಸಿದ ಆರೋಪ: ನಟ ಶ್ರೀಜಿತ್ ರವಿ ಬಂಧನ
ತ್ರಿಶೂರು, ಜು. 7: ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಬಾಲಕಿಯರ ಮುಂದೆ ನಗ್ನತೆ ಪ್ರದರ್ಶಿಸಿದ ಆರೋಪದಲ್ಲಿ ಮಲಯಾಳಂ ನಟ ಶ್ರೀಜಿತ್ ರವಿಯನ್ನು ಪೊಲೀಸರು ಬಂಧಿಸಿದ್ದಾರೆ.
ತ್ರಿಶೂರ್ನ ಅಯ್ಯಂಥೋಲೆಯ ಪ್ರದೇಶದಲ್ಲಿರುವ ಎಸ್ಎನ್ ಪಾರ್ಕ್ ಸಮೀಪ ಸೋಮವಾರ 9 ಹಾಗೂ 14 ವಯಸ್ಸಿನ ಬಾಲಕಿಯರ ಮುಂದೆ ಶ್ರೀಜಿತ್ ರವಿ (46) ನಗ್ನತೆ ಪ್ರದರ್ಶಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಪೊಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತ್ರಿಶೂರ್ ವೆಸ್ಟ್ ಪೊಲೀಸರು ತಿಳಿಸಿದ್ದಾರೆ.
ವಾಹನದ ವಿವರಗಳ ಆಧಾರದಲ್ಲಿ ತನಿಖೆ ನಡೆಸಲಾಗಿತ್ತು. ಆತ ಪಾರ್ಕ್ನಲ್ಲಿ ಕಪ್ಪು ಕಾರಿನಲ್ಲಿ ಇದ್ದ ಎಂದು ಬಾಲಕಿಯರು ತಿಳಿಸಿದ್ದರು. ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಆ ವ್ಯಕ್ತಿ ಶ್ರೀಜಿತ್ ರವಿ ಎಂದು ಗುರುತಿಸಲಾಯಿತು ಎಂದು ಅವರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಶ್ರೀಜಿತ್ ರವಿ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ ಸಂದರ್ಭ ಅವರು, ‘‘ತಾನು ವರ್ತನೆಯ ಅಸ್ವಸ್ಥತೆ’’ಗೆ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.
ಶ್ರೀಜಿತ್ ರವಿ ವಿರುದ್ದ ಅಶ್ಲೀಲ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗುತ್ತಿರುವುದು ಇದೇ ಮೊದಲಲ್ಲ. 2016ರಲ್ಲಿ ಪಾಲಕ್ಕಾಡಿನ 14 ಶಾಲಾ ಬಾಲಕಿಯರ ಗುಂಪು ಶ್ರೀಜಿತ್ ರವಿ ನಗ್ನತೆ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದ್ದರು. ಬಳಿಕ ಶ್ರೀಜಿತ್ ರವಿಯನ್ನು ಬಂಧಿಸಲಾಗಿತ್ತು. ಆಗ ಅವರಿಗೆ ಜಾಮೀನು ದೊರಕಿತ್ತು.