ಉದ್ಯೋಗ ನೆಪದಲ್ಲಿ ವಿವಾಹಿತ ಮಹಿಳೆ ಮೇಲೆ ಮಂತ್ರವಾದಿ ಅತ್ಯಾಚಾರ: ದೂರು
ಬರ್ಮೇರ್ (ರಾಜಸ್ಥಾನ): ವಾಮಾಚಾರದಿಂದ ಉದ್ಯೋಗ ದೊರಕಿಸಿಕೊಡುವುದಾಗಿ ನಂಬಿಸಿದ ಮಂತ್ರವಾದಿಯೊಬ್ಬ 27 ವರ್ಷ ವಯಸ್ಸಿನ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ.
ಸಂತ್ರಸ್ತೆ ಮಹಿಳೆ ಗುಡಮಲನಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ನೀಡಿದ್ದು, ಆರೋಪಿ ಕಳೆದ ಒಂದು ವರ್ಷದಿಂದ ಅತ್ಯಾಚಾರ ಎಸಗುತ್ತಿದ್ದು, ಈ ಬಗ್ಗೆ ಅಶ್ಲೀಲ ವಿಡಿಯೊ ಚಿತ್ರೀಕರಿಸಿ, ಅದರ ಆಧಾರದಲ್ಲಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಎಂದು ಆಪಾದಿಸಿದ್ದಾರೆ.
ಚಂಪಾಲಾಲ್ (40) ಎಂಬ ಮಂತ್ರವಾದಿ ತನ್ನ ಯಕ್ಷಿಣಿ ವಿದ್ಯೆಯಿಂದ ಉದ್ಯೋಗ ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದ. ಆರಂಭದಲ್ಲಿ ಆತನ ಆಮಿಷವನ್ನು ಮಹಿಳೆ ತಿರಸ್ಕರಿಸಿದ್ದರು. ಆದರೆ ಕ್ರಮೇಣ ಆತನ ಬಲೆಗೆ ಬಿದ್ದರು" ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಚಂಪಾಲಾಲ್ ಆ ಬಳಿಕ ಮಹಿಳೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಕೆಲ ಅಶ್ಲೀಲ ವಿಡಿಯೊವನ್ನೂ ಚಿತ್ರೀಕರಿಸಿಕೊಂಡು, ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ಆರೋಪಿ ತಲೆ ಮರೆಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ timesofindia.com ವರದಿ ಮಾಡಿದೆ.