ಶಾಲಾ ಆವರಣದಲ್ಲಿ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ: ಆರೋಪಿ ವಾಚ್ಮನ್ ಬಂಧನ
ಭೋಪಾಲ್, ಜು.24: ಇಲ್ಲಿನ ಖೋಫಿಝಾ ಪ್ರದೇಶದ ಸರಕಾರಿ ಶಾಲೆಯೊಂದರ ಶೌಚಾಲಯದಲ್ಲಿ ಎಂಟೂವರೆ ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆದಿರುವುದಾಗಿ ಪೊಲೀಸರು ಶನಿವಾರತಿಳಿಸಿದ್ದಾರೆ. ಶಾಲೆಯ ವಾಚ್ಮನ್ ಈ ಕೃತ್ಯವನ್ನು ಎಸಗಿದ್ದಾನೆಂದು ಅವರು ಆರೋಪಿಸಿದ್ದಾರೆ.
ಸಂತ್ರಸ್ತ ಬಾಲಕಿಯು ನೀಡಿದ ಆರೋಪಿಯ ಚಹರೆಗಳ ಕುರಿತ ಮಾಹಿತಿಯ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದು, ಆತನನ್ನು ಲಕ್ಷ್ಮಿನಾರಾಯಣ್ ಧನಕ್ ಎಂದು ಗುರುತಿಸಲಾಗಿದೆ. ಆರೋಪಿಯು ಶಾಲೆಯಲ್ಲಿ ವಾಚ್ಮನ್ ಆಗಿ ಕೆಲಸ ಮಾಡುತ್ತಿದ್ದನು ಹಾಗೂ ಆತನನ್ನು ಬಂಧಿಸಲಾಗಿದ್ದು, ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಈತನ ಪತ್ನಿ ಇದೇ ಶಾಲೆಯಲ್ಲಿ ಜಾಡಮಾಲಿಯಾಗಿ ಕೆಲಸ ಮಾಡುತ್ತಿದ್ದಾಳೆಂದು ತಿಳಿದುಬಂದಿದೆ.
ಸಂತ್ರಸ್ತ ಬಾಲಕಿಯು ನಾಲ್ಕನೆ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಆಕೆ ಘಟನೆ ನಡೆದ ಆರು ದಿನಗಳ ಹಿಂದಷ್ಟೇ ಶಾಲೆಯಲ್ಲಿ ಪ್ರವೇಶಾತಿಯನ್ನು ಪಡೆದಿದ್ದಳು. ಈ ಘಟನೆಯು ಶುಕ್ರವಾರ ಮಧ್ಯಾಹ್ನ 1:30ರ ವೇಳೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಧ್ಯಾಹ್ನ ಊಟದ ಬಿಡುವಿ ಸಮಯದಲ್ಲಿ ಬಾಲಕಿಯು ಬಾತ್ರೂಂಗೆ ತೆರಳಿದ್ದಳು. ಈ ಸಂದರ್ಭ ಆರೋಪಿಯು ಆಕೆಯ ಕಣ್ಣನ್ನು ಮುಚ್ಚಿ, ಸ್ನಾನಗೃಹದೊಳಗೆ ಎಳೆದೊಯ್ದು ಅತ್ಯಾಚಾರವೆಸಗಿದ್ದಾನೆ ಹಾಗೂ ಆನಂತರ ಸ್ಥಳದಿಂದ ಪರಾರಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಹಳದಿ ಶರ್ಟ್ ಧರಿಸಿದ್ದ ವ್ಯಕ್ತಿಯು ತನ್ನನ್ನು ಸ್ನಾನಗೃಹದೊಳಗೆ ಎಳೆದುಕೊಂಡು ಹೋಗಿದ್ದಾನೆಂದು ಬಾಲಕಿ ಶಿಕ್ಷಕರಿಗೆ ತಿಳಿಸಿದ್ದಳು. ಘಟನೆಯ ಆನಂತರ ಶಾಲಾ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಲಕಿ ನೀಡಿದ ಮಾಹಿತಿಯ ಮೇರೆಗೆ ಕಾರ್ಯಾಚರಿಸಿ ಆರೋಪಿಯನ್ನು ಬಂಧಿಸಿದ್ದಾರೆ.