ಚೆಸ್ ಒಲಿಂಪಿಯಾಡ್; ಭಾರತದ ಪುರುಷರ, ಮಹಿಳೆಯರ ತಂಡಕ್ಕೆ ಕಂಚಿನ ಪದಕ
(AICF Photo)
ಮಾಮಲ್ಲಾಪುರಂ: ಭಾರತದ ಚೆಸ್ ಇತಿಹಾಸದಲ್ಲಿ ಮಂಗಳವಾರ ಐತಿಹಾಸಿಕ ದಿನವಾಗಿದ್ದು, 44ನೇ ಚೆಸ್ ಒಲಿಂಪಿಯಾಡ್ನಲ್ಲಿ ಭಾರತದ ಪುರುಷರ ಹಾಗೂ ಮಹಿಳೆಯರ ತಂಡ ಕಂಚಿನ ಪದಕ ಗೆದ್ದುಕೊಂಡಿವೆ.
ಭಾರತದ ಯುವ ಆಟಗಾರರಾದ ಡಿ.ಗುಕೇಶ್, ಆರ್.ಪ್ರಜ್ಞಾನಂದ, ನಿಹಾಲ್ ಸರೀನ್, ರೌನಕ್ ಸಧ್ವಾನಿ ಮತ್ತು ಬಿ.ಅಧಿಬನ್ ಅವರನ್ನೊಳಗೊಂಡ ಭಾರತದ 2 ತಂಡ ಸೋಮವಾರ ಉಜ್ಬೇಕಿಸ್ತಾನ ವಿರುದ್ಧ ಸೋಲುವ ಮೂಲಕ ಸುವರ್ಣಾವಕಾಶ ಕಳೆದುಕೊಂಡಿತು. ಉಜ್ಬೇಕಿಸ್ತಾನ ಪುರುಷರು ಅಗ್ರಸ್ಥಾನಿಗಳಾಗಿ ಸ್ಪರ್ಧೆ ಮುಗಿಸಿದರೆ ಉಕ್ರೇನ್ ಮಹಿಳೆಯರು ಚಿನ್ನದ ಪದಕ ಗೆದ್ದರು.
"ಪದಕ ಗೆದ್ದಿರುವುದು ಐತಿಹಾಸಿಕ; ಆದರೆ ನಮ್ಮ ಸಂಪೂರ್ಣ ಸಾಮರ್ಥ್ಯಕ್ಕೆ ತಕ್ಕಂತೆ ನಾವು ಆಡಲಾಗಲಿಲ್ಲ. ಈ ಕಂಚಿನ ಪದಕದ ಸಾಧನೆ ಸಾಲದು ಎಂಬ ಭಾವನೆ ನಮ್ಮದು" ಎಂದು ಭಾರತದ ನಂ.1 ಆಟಗಾರ್ತಿ ಕೊನೆರು ಹಂಪಿ ನುಡಿದರು. ಇದು ಭಾರತದ ಮಹಿಳೆಯರಿಗೆ ಚೊಚ್ಚಲ ಒಲಿಂಪಿಯಾಡ್ ಪದಕವಾಗಿದೆ. ಮುಕ್ತ ವಿಭಾಗದಲ್ಲಿ ಯುವ ಪಟುಗಳು ಜರ್ಮನಿಯ ವಿರುದ್ಧ ಗೆಲುವು ಸಾಧಿಸುವ ಮೂಲಕ ಪದಕ ಖಾತರಿಪಡಿಸಿಕೊಂಡರು.
ಒಲಿಂಪಿಯಾಡ್ ಪದಕ ಗೆದ್ದ ಎಂಟು ವರ್ಷಗಳ ಬಳಿಕ, ಯುವ ಪ್ರತಿಭಾವಂತ ಆಟಗಾರರು ಪೋಡಿಯಂ ಸಾಧನೆ ಮಾಡುವಲ್ಲಿ ಯಶಸ್ವಿಯಾದರು. ಭಾರತ 2 ತಂಡ ಜರ್ಮನಿ ವಿರುದ್ಧ ಮಂಗಳವಾರ ಗೆಲುವು ಸಾಧಿಸಿ 11 ಸುತ್ತುಗಳ ಬಳಿಕ 18 ಅಂಕ ಸಂಪಾದಿಸಿದರು. ಭಾರತಕ್ಕಿಂತ ಒಂದು ಅಂಕ ಹೆಚ್ಚು ಪಡೆದ ಉಜ್ಬೇಕಿಸ್ತಾನ (19) ಚಿನ್ನ ಗೆದ್ದಿತು. ಅರ್ಮೇನಿಯಾ ಕೂಡಾ 19 ಅಂಕ ಪಡೆದರೂ ಫಿಡೆಯ ಗಣಿತಸೂತ್ರ ಉಜ್ಬೇಕಿಸ್ತಾನಕ್ಕೆ ವರದಾನವಾಯಿತು. ಅಂತಿಮ ಸುತ್ತಿನಲ್ಲಿ ಅಮೆರಿಕ ವಿರುದ್ಧ 2-2 ಡ್ರಾ ಸಾಧಿಸಿದ ಭಾರತ 1 ತಂಡ ಪದಕ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಭಾರತದ ಮೂರನೇ ತಂಡ 36ನೇ ಸ್ಥಾನ ಪಡೆಯಿತು.