ಉತ್ತರ ಪ್ರದೇಶ; ಕಟ್ಟಡದಲ್ಲಿ ಬೆಂಕಿ ಆಕಸ್ಮಿಕ: ಐದು ಮಂದಿ ಜೀವಂತ ದಹನ

ಮೊರದಾಬಾದ್: ಉತ್ತರ ಪ್ರದೇಶದ ಮೊರದಾಬಾದ್ ನಗರದ ಗಲ್‍ಶಹೀದ್ ಪ್ರದೇಶದ ಮೂರು ಮಹಡಿ ಕಟ್ಟಡವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಐದು ಮಂದಿ ಜೀವಂತ ದಹನವಾಗಿದ್ದು, ಇತರ ಇಬ್ಬರು ತೀವ್ರ ಸುಟ್ಟಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭೀಕರ ಬೆಂಕಿಯನ್ನು ಶಮನಗೊಳಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಮೂರು ಗಂಟೆ ಕಾಲ ಶ್ರಮಿಸಬೇಕಾಯಿತು. 12 ಮಂದಿಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದು, ಐದು ಮಂದಿ ತೀವ್ರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು.
ಗಾಯಾಳುಗಳನ್ನು ಮೊರದಾಬಾದ್‍ನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಪೈಕಿ ನಾಲ್ವರು ಆಸ್ಪತ್ರೆಗೆ ಸಾಗಿಸುವ ವೇಳೆಗೆ ಮೃತಪಟ್ಟರೆ, ಚಿಕಿತ್ಸೆ ವೇಳೆ ಒಬ್ಬ ಕೊನೆಯುಸಿರೆಳೆದಿದ್ದಾನೆ. ಅಗ್ನಿಶಾಮಕ ದಳ ಸಿಬ್ಬಂದಿ ಇನ್ನೂ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಮೊರದಾಬಾದ್ ಜಿಲ್ಲಾಧಿಕಾರಿ ಶೈಲೇಂದ್ರ ಸಿಂಗ್ ಮತ್ತು ಹಿರಿಯ ಪೊಲೀಸ್ ಅಧೀಕ್ಷಕ ಹೇಮಂತ ಕುತಿಯಾಲ್ ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯಾಚರಣೆ ವೀಕ್ಷಿಸಿದರು. ಕಟ್ಟಡದ ಮಾಲಕ ನೆಲಮಹಡಿಯಲ್ಲಿ ಗುಜರಿ ಸಾಮಗ್ರಿಗಳನ್ನು ದಾಸ್ತಾನು ಮಾಡಿದ್ದ. ಇದೇ ಕಟ್ಟಡದ ಮೂರು ಮಹಡಿಗಳಲ್ಲಿ ಅವರ ಕುಟುಂಬ ವಾಸವಿತ್ತು.
ಗುಜರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾರಣ ತಿಳಿದುಬಂದಿಲ್ಲ. "ಮೂವರು ಸಹೋದರರ ಕೂಡುಕುಟುಂಬ ಮನೆಯಲ್ಲಿ ವಾಸವಿತ್ತು. ಇದುವರೆಗೆ ಇಬ್ಬರು ಮಕ್ಕಳು ಸೇರಿದಂತೆ ಐದು ಮಂದಿ ಮೃತಪಟ್ಟಿದ್ದಾರೆ. ಏಳು ಮಂದಿಯನ್ನು ರಕ್ಷಿಸಲಾಗಿದೆ. ಘಟನೆಗೆ ಕಾರಣದ ಬಗ್ಗೆ ಅಗ್ನಿಶಾಮಕ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದರೆ" ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.







