ಮಧ್ಯಪ್ರದೇಶ: ವೈದ್ಯರ ನಿರ್ಲಕ್ಷ್ಯ, ತಾಯಿಯ ಮಡಿಲಲ್ಲೇ ಪ್ರಾಣಬಿಟ್ಟ ಬಾಲಕ
ಸಾಂದರ್ಭಿಕ ಚಿತ್ರ, Photo:PTI
ಭೋಪಾಲ್: ವೈದ್ಯಕೀಯ ನಿರ್ಲಕ್ಷ್ಯದ ಆಘಾತಕಾರಿ ಘಟನೆಯೊಂದರಲ್ಲಿ ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಸರಕಾರಿ ಆರೋಗ್ಯ ಕೇಂದ್ರದಲ್ಲಿ ಐದು ವರ್ಷದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ತನ್ನ ತಾಯಿಯ ಮಡಿಲಲ್ಲಿ ಸಾವನ್ನಪ್ಪಿದ್ದಾನೆ (Madhya Pradesh Boy, 5, Dies In Mother's Arms)ಎಂದು NDTV ವರದಿ ಮಾಡಿದೆ.
ಸಂಜಯ್ ಪಾಂಡ್ರೆ ಹಾಗೂ ಅವರ ಕುಟುಂಬದವರು ಬಾಲಕ ರಿಷಿಯನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು. ಆದರೆ, ಆಸ್ಪತ್ರೆಯ ಹೊರಗೆ ಗಂಟೆಗಟ್ಟಲೆ ಕಾದರೂ ಒಬ್ಬ ವೈದ್ಯ ಅಥವಾ ವೈದ್ಯಾಧಿಕಾರಿಯೂ ಅಸ್ವಸ್ಥಗೊಂಡ ಮಗುವಿಗೆ ಚಿಕಿತ್ಸೆ ನೀಡಲಿಲ್ಲ. ಬಾಲಕ ತನ್ನ ಅಸಹಾಯಕ ಪೋಷಕರ ಸಮ್ಮುಖದಲ್ಲಿ ಸಾವನ್ನಪ್ಪಿದ್ದಾನೆ.
ಈ ಘಟನೆಯು ರಾಜ್ಯದಲ್ಲಿನ ಕಳಪೆ ಆರೋಗ್ಯ ಮೂಲಸೌಕರ್ಯವನ್ನು ಮತ್ತೊಮ್ಮೆ ಬೆಳಕಿಗೆ ಬಂದಿದೆ. ಸ್ಥಳೀಯ ನಿವಾಸಿಗಳಲ್ಲಿ ದುಃಖ ಹಾಗೂ ಹತಾಶೆಯನ್ನು ಉಂಟುಮಾಡಿತು. ಬಾಲಕ ಸಾವನ್ನಪ್ಪಿದ ಗಂಟೆಗಳ ನಂತರವೂ ಆರೋಗ್ಯ ಕೇಂದ್ರಕ್ಕೆ ನಿಯೋಜಿಸಲಾದ ವೈದ್ಯರಾಗಲಿ ಅಥವಾ ವೈದ್ಯಾಧಿಕಾರಿಯಾಗಲಿ ಲಭ್ಯವಿರಲಿಲ್ಲ ಎಂದು ತಿಳಿದುಬಂದಿದೆ.