ಕ್ಯಾಬ್ ಚಾಲಕನಿಗೆ ಹಲ್ಲೆ ನಡೆಸಿ 'ಜೈ ಶ್ರೀ ರಾಮ್' ಹೇಳಲು ಬಲವಂತಪಡಿಸಿದ ದುಷ್ಕರ್ಮಿಗಳು; ಆರೋಪ

photo credit- twitter
ಹೈದರಾಬಾದ್: ಕ್ಯಾಬ್(Cab) ಚಾಲಕರೊಬ್ಬರನ್ನು ದುಷ್ಕರ್ಮಿಗಳ ಗುಂಪೊಂದು ಸುಮಾರು ಮೂರ್ನಾಲ್ಕು ಕಿಮೀ ದೂರದ ತನಕ ಬೆಂಬತ್ತಿ ಹಲ್ಲೆ ನಡೆಸಿ 'ಜೈ ಶ್ರೀ ರಾಮ್'(Jai Shri Ram) ಹೇಳುವಂತೆ ಬಲವಂತಪಡಿಸಿದ್ದಾರೆನ್ನಲಾದ ಘಟನೆ ರವಿವಾರ ಮುಂಜಾನೆ ನಗರದಲ್ಲಿ ನಡೆದಿದೆ ಎಂದು thenewsminute.com ವರದಿ ಮಾಡಿದೆ.
ಸಯ್ಯದ್ ಲತೀಫುದ್ದೀನ್ ಎಂಬ ಉಬರ್ ಚಾಲಕ ರವಿವಾರದಂದೇ ತಮ್ಮ ಕರ್ತವ್ಯದ ಮೊದಲ ದಿನದಲ್ಲಿದ್ದರು ಹಾಗೂ ಅಲ್ಕಾಪುರಿಯಿಂದ ಪ್ರಯಾಣಿಕರೊಬ್ಬರನ್ನು ಪಿಕಪ್ ಮಾಡಲು ಒಪ್ಪಿಕೊಂಡಿದ್ದರು. ಬೆಳಿಗ್ಗೆ 3.45 ರ ಸುಮಾರಿಗೆ ಅಲ್ಕಾಪುರಿಯತ್ತ ಸಾಗುತ್ತಿರುವ ವೇಳೆ ತೋಲಿಚೌಕಿ ಸಮೀಪ ಬೈಕುಗಳಲ್ಲಿ ಬಂದ ಕೆಲ ಮಂದಿ ಕಾರನ್ನು ತಡೆದು ನಿಲ್ಲಿಸಿದ್ದರು, ಕಾರನ್ನು ಗುದ್ದಲು ಪ್ರಾರಂಭಿಸಿದ್ದರು. ಏನಾಯಿತೆಂದು ಅವರಲ್ಲಿ ಕೇಳಿದಾಗ ಅವರ ಮಾತಿನ ಶೈಲಿಯಿಂದ ಆವರ ಧರ್ಮದ ಬಗ್ಗೆ ತಿಳಿದುಕೊಂಡು ದುಷ್ಕರ್ಮಿಗಳು ಜೈ ಶ್ರೀ ರಾಮ್ ಹೇಳುವಂತೆ ಬಲವಂತಪಡಿಸಿ, ಕಾರಿನ ಬಾಗಿಲನ್ನು ತೆರೆಯಲು ಪ್ರಯತ್ನಿಸಿ ಹಲ್ಲೆ ನಡೆಸಲು ಯತ್ನಿಸಿದ್ದರು ಎಂದು ಆರೋಪಿಸಲಾಗಿದೆ.
ಹೇಗೋ ಅವರಿಂದ ಲತೀಫುದ್ದೀನ್ ತಪ್ಪಿಸಿಕೊಂಡು ಕಾರನ್ನು ವೇಗವಾಗಿ ಚಲಾಯಿಸಿದರೂ ದುಷ್ಕರ್ಮಿಗಳು ಸುಮಾರು 3 ಕಿಮೀನಷ್ಟು ಬೆಂಬತ್ತಿದ್ದರು. ಹೀಗೆ ಸಾಗಿ ದಾರಿ ತಪ್ಪಿ ಹೋಗಿ ಡೆಡ್ ಎಂಡ್ನಲ್ಲಿ ಕಾರು ನಿಲ್ಲಿಸುವಂತಾಗಿತ್ತು. ಈ ನಡುವೆ ದುಷ್ಕರ್ಮಿಗಳು ದೊಡ್ಡ ಕಲ್ಲುಗಳನ್ನು ಕಾರಿನತ್ತ ಎಸೆದು ಗಾಜುಗಳಿಗೆ ಹಾನಿಯೆಸಗಿದ್ದರು. ಅಂತಿಮವಾಗಿ ಕಾರು ನಿಂತ ಕೂಡಲೇ ಲತೀಫುದ್ದೀನ್ ಬಳಿಯಿದ್ದ ರೂ 6000 ಕೆಲ ದಾಖಲೆಗಳೊಂದಿಗೆ ಅವರು ಪರಾರಿಯಾಗಿದ್ದರು ಎಂದು ಆರೋಪಿಸಲಾಗಿದೆ.
ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಬ್ರಿಟನ್ ನೂತನ ಪ್ರಧಾನಿಯಾಗಿ ಲಿಝ್ ಟ್ರೂಸ್ ಆಯ್ಕೆ







