ಹಿಂದಿ ದೇಶದ ಎಲ್ಲ ಭಾಷೆಗಳ ಸ್ನೇಹಿತ: ಅಮಿತ್ ಶಾ

ಅಮಿತ್ ಶಾ (File Photo)
ಹೊಸದಿಲ್ಲಿ: ಹಿಂದಿ (Hindi) ಭಾಷೆ ಯಾವುದೇ ಭಾಷೆಗೆ ಪ್ರತಿಸ್ಪರ್ಧಿಯಲ್ಲ, ಅದು ದೇಶದ ಇತರ ಎಲ್ಲಾ ಭಾಷೆಗಳ ಸ್ನೇಹಿತ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ. ಬುಧವಾರ 'ಹಿಂದಿ ದಿವಸ್' ಹಿನ್ನೆಲೆಯಲ್ಲಿ ಅಖಿಲ ಭಾರತ ಅಧಿಕೃತ ಭಾಷಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂಬುದು ತಪ್ಪು ಮಾಹಿತಿ ಎಂದರು.
"ಕೆಲವರು ಹಿಂದಿ ಮತ್ತು ಗುಜರಾತಿ, ಹಿಂದಿ ಮತ್ತು ತಮಿಳು, ಹಿಂದಿ ಮತ್ತು ಮರಾಠಿ ಭಾಷೆಗಳು ಪ್ರತಿಸ್ಪರ್ಧಿ ಎಂಬ ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ. ಹಿಂದಿ ಭಾಷೆ ಯಾವುದೇ ಭಾಷೆಗೆ ಪ್ರತಿಸ್ಪರ್ಧಿಯಲ್ಲ ಅದು ದೇಶದ ಎಲ್ಲ ಭಾಷೆಗಳ ಸ್ನೇಹಿತ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ" ಎಂದು ಅವರು ಹೇಳಿದ್ದಾರೆ.
"ಭಾಷೆಗಳ ಸಹಬಾಳ್ವೆಯನ್ನು ಎಲ್ಲಿಯವರೆಗೆ ನಾವು ಒಪ್ಪಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಭಾಷೆಯಲ್ಲಿ ದೇಶವನ್ನು ನಡೆಸುವ ಕನಸನ್ನು ನನಸಾಗಿಸಲು ಸಾಧ್ಯವಿಲ್ಲ" ಎಂದ ಅವರು, ಎಲ್ಲ ಭಾಷೆಗಳ ಏಳಿಗೆಯಿಂದ ಮಾತ್ರ ಹಿಂದಿ ಏಳಿಗೆಯಾಗಲಿದೆ ಎಂದರು.
'ಪ್ರತಿ ಭಾರತೀಯ ಭಾಷೆ ವಿಶಿಷ್ಟವಾದ ಇತಿಹಾಸವನ್ನು ಹೊಂದಿದ್ದರೆ, ಸಾರ್ವಜನಿಕ ಪ್ರಜ್ಞೆಯಲ್ಲಿ ಹಿಂದಿಗೆ ವಿಶೇಷ ಸ್ಥಾನವಿದೆ. ಏಕೆಂದರೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ, ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್, ವಿನೋಬಾ ಭಾವೆ, ಜವಾಹರಲಾಲ್ ನೆಹರೂ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಯಾಣವನ್ನು ತ್ವರಿತಗೊಳಿಸಲು ಹಿಂದಿಯನ್ನು ಬಳಸಿದ್ದರು' ಎಂದು ಅಮಿತ್ ಶಾ ಹೇಳಿದ್ದಾರೆ.







