ಮದರಸಾಗಳು ಮತ್ತು ಅಲಿಗಡ ವಿವಿಯನ್ನು ಸ್ಫೋಟಿಸಬೇಕು ಎಂದಿದ್ದ ಯತಿ ನರಸಿಂಹಾನಂದ ವಿರುದ್ಧ ಪ್ರಕರಣ ದಾಖಲು

ಯತಿ ನರಸಿಂಹಾನಂದ (Photo: Facebook)
ಅಲಿಗಡ(ಉ.ಪ್ರ): ಮದರಸಾಗಳು(madrassas) ಮತ್ತು ಅಲಿಗಡ ಮುಸ್ಲಿಂ ವಿವಿಯ(Aligarh Muslim University) ಧ್ವಂಸಕ್ಕೆ ಕರೆ ನೀಡಿದ್ದಕ್ಕಾಗಿ ಅಲಿಗಡ ಪೊಲೀಸರು ರವಿವಾರ ಹಿಂದುತ್ವವಾದಿ ಸಂತ ಯತಿ ನರಸಿಂಹಾನಂದ(Yati Narsinghanand) ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಹಿಂದು ಮಹಾಸಭಾ ರವಿವಾರ ಅಲಿಗಡದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಈ ಹೇಳಿಕೆಯನ್ನು ನೀಡಿದ್ದ ನರಸಿಂಹಾನಂದ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಜ್ಯದಲ್ಲಿಯ ಮಾನ್ಯತೆ ಹೊಂದಿರದ ಮದರಸಾಗಳ ಸಮೀಕ್ಷೆಯನ್ನು ನಡೆಸುವ ಉ.ಪ್ರ. ಸರಕಾರದ ನಿರ್ಧಾರದ ಕುರಿತು ಪ್ರಶ್ನೆಗೆ ಉತ್ತರಿಸುತ್ತಿದ್ದ ನರಸಿಂಹಾನಂದ, ಮೊದಲಿಗೆ ಮದರಸಾಗಳು ಅಸ್ತಿತ್ವದಲ್ಲಿ ಇರಲೇಬಾರದು. ಅವುಗಳನ್ನು ಗನ್ಪೌಡರ್ ಬಳಿಸಿ ಉಡಾಯಿಸಬೇಕು ಅಥವಾ ನಾವು ಚೀನಾದ ನೀತಿಯನ್ನು ಅನುಸರಿಸಿ ಮದರಸಾಗಳ ನಿವಾಸಿಗಳನ್ನು ಬಂಧನ ಶಿಬಿರಗಳಿಗೆ ರವಾನಿಸಬೇಕು ಎಂದು ಹೇಳಿದ್ದರು.
ಅಲಿಗಡವನ್ನು ‘ಭಾರತ ವಿಭಜನೆಯ ಬೀಜಗಳನ್ನು ’ಬಿತ್ತಲಾಗಿದ್ದ ಸ್ಥಳ ಎಂದೂ ಬಣ್ಣಿಸಿದ್ದ ನರಸಿಂಹಾನಂದ, ಅಲಿಗಡ ವಿವಿಯನ್ನು ಬಾಂಬ್ಗಳನ್ನು ಬಳಸಿ ಧ್ವಂಸಗೊಳಿಸಬೇಕು. ತನ್ನ ಮಾತು ಮತ್ತು ಕೃತಿಗಳ ಕಾನೂನು ಪರಿಣಾಮಗಳ ಬಗ್ಗೆ ತಾನು ತಲೆ ಕೆಡಿಸಿಕೊಂಡಿಲ್ಲ. ನ್ಯಾಯಾಲಯದಲ್ಲಿ ಪ್ರಕರಣಗಳು ಬರುತ್ತಲೇ ಇರುತ್ತವೆ. ಈಗ ನಾನು ಏನನ್ನು ಹೇಳುತ್ತಿದ್ದೇನೆಯೋ ಅದಕ್ಕಾಗಿಯೂ ಪ್ರಕರಣವನ್ನು ನಾನು ಎದುರಿಸಬೇಕಾಗಬಹುದು ಎಂದು ನರಸಿಂಹಾನಂದ ಹೇಳಿಕೆ ನೀಡಿದ್ದಾಗಿ ವರದಿಯಾಗಿತ್ತು.
ನರಸಿಂಹಾನಂದ್ ಮತ್ತು ಇತರರ ವಿರುದ್ಧ ಐಪಿಸಿಯ ವಿವಿಧ ಕಲಮ್ಗಳಡಿ ಅಲಿಗಡದ ಗಾಂಧಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ಕುಲದೀಪ್ ಸಿಂಗ್ ಗುಣಾವತ್ ತಿಳಿಸಿದರು.
ಇದನ್ನೂ ಓದಿ: ಹಿಂದು ಸಂಘಟನೆಗಳನ್ನು ಬೆಂಬಲಿಸಿದ್ದಕ್ಕೆ ಬೆದರಿಕೆ ಕರೆ ಬಂದಿದೆ ಎಂದು ಸುಳ್ಳು ಹೇಳಿದ ವೈದ್ಯನ ವಿರುದ್ಧ ಪ್ರಕರಣ ದಾಖಲು







