ಉ.ಪ್ರ.: ಪರೋಲ್ನಲ್ಲಿದ್ದ ತಂದೆಯಿಂದ ಕಿರುಕುಳ; ವಿಷ ಸೇವಿಸಿದ ಇಬ್ಬರು ಸಹೋದರಿಯರು
ಬಂದಾ (ಉತ್ತರಪ್ರದೇಶ): ಪರೋಲ್ನಲ್ಲಿದ್ದ ತಂದೆಯ ಕಿರುಕುಳ ತಾಳಲಾರದೆ ಹತಾಶೆಗೊಂಡ ಇಬ್ಬರು ಸಹೋದರಿಯರು ವಿಷ ಸೇವಿಸಿದ ಹಾಗೂ ಅವರಲ್ಲಿ ಒಬ್ಬರು ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ಬಾಂದಾದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಬೆರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಪರ್ಹ್ರಿಯಲ್ಲಿ ಈ ಘಟನೆ ನಡೆದಿದೆ.
ಇಬ್ಬರು ಸಹೋದರಿಯರು ರವಿವಾರ ತಡ ರಾತ್ರಿ ವಿಷ ಸೇವಿಸಿದ್ದಾರೆ. ಇಬ್ಬರನ್ನೂ ಚಿಕಿತ್ಸೆಗಾಗಿ ಬಂದಾದ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಲಾಗಿತ್ತು. ಅವರಲ್ಲಿ ಹಿರಿಯ ಸಹೋದರಿ ಪ್ರಿಯಾಂಕಾ (21) ಸೋಮವಾರ ಮೃತಪಟ್ಟಿದ್ದಾರೆ. ಕಿರಿಯ ಸಹೋದರಿ ಸ್ವಪ್ನಾ (21)ಗೆ ಚಿಕಿತ್ಸೆ ಮುಂದುವರಿದಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಲಕ್ಷ್ಮೀ ನಿವಾಸ್ ಮಿಶ್ರಾ ಅವರು ತಿಳಿಸಿದ್ದಾರೆ.
ಯುವತಿಯರ ತಾಯಿ ರೇಖಾ ದೇವಿ ತನ್ನ ಪತಿ ಮಲ್ಖಾನ್ ಸಿಂಗ್ ಹಾಗೂ ಸೋದರ ಮಾವಂದಿರಾದ ಸುರೇಶ್ ಹಾಗೂ ರಾಜೇಶ್ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಆತ್ಮಹತ್ಯೆಗೆ ಉತ್ತೇಜನ ನೀಡಿದ ಪ್ರಕರಣ ದಾಖಲಿಸಲಾಗಿದೆ. ಮಲ್ಖಾನ್ ಸಿಂಗ್ನನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೂವರು ಆಗಾಗ ರೇಖಾ ದೇವಿ ಹಾಗೂ ಅವರ ಪುತ್ರಿಯರಿಗೆ ಥಳಿಸುತ್ತಿದ್ದರು. ದೇಶಿ ನಿರ್ಮಿತ ಪಿಸ್ತೂಲ್ನಿಂದ ಬೆದರಿಸುತ್ತಿದ್ದರು. ಮನೆಯಲ್ಲಿ ಆಹಾರ ತಯಾರಿಸಲು ಅವಕಾಶ ನೀಡುತ್ತಿರಲಿಲ್ಲ ಎಂದು ಅವರು ದೂರನ್ನು ಉಲ್ಲೇಖಿಸಿ ಹೇಳಿದ್ದಾರೆ.