ಜೈಲಿನಲ್ಲೇ ವೈದ್ಯೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವಿಚಾರಣಾಧೀನ ಕೈದಿ
ಕೈದಿಗಳ ಆರೋಗ್ಯ ತಪಾಸಣೆ ನಡೆಸುವ ವೇಳೆ ಘಟನೆ
ಹೊಸದಿಲ್ಲಿ: ಅತ್ಯಾಚಾರ ಆರೋಪಿಯಾಗಿ ಜೈಲು ಸೇರಿದ್ದ ವಿಚಾರಣಾಧೀನ ಕೈದಿಯೊಬ್ಬ ಜೈಲು ಆವರಣದಲ್ಲೇ ವೈದ್ಯೆಗೆ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ.
ಮಂಡೋಲಿ ಜೈಲಿನಲ್ಲಿ ಸೋಮವಾರ ವೈದ್ಯೆ ಎಲ್ಲ ಕೈದಿಗಳ ಆರೋಗ್ಯ ತಪಾಸಣೆ ನಡೆಸುವ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಕೈದಿ ಬಾತ್ರೂಂನಲ್ಲಿ ಅಡಗಿಕೊಂಡು, ವೈದ್ಯೆಗೆ ಲೈಂಗಿಕ ಕಿರುಕುಳ ನೀಡಿ, ಅತ್ಯಾಚಾರಕ್ಕೂ ಯತ್ನಿಸಿದ. ಆದರೆ ವೈದ್ಯೆ ಆತನನ್ನು ಆಚೆಗೆ ತಳ್ಳಿ ಹೊರಕ್ಕೆ ಓಡಿಹೋಗುವಲ್ಲಿ ಯಶಸ್ವಿಯಾದರು. ತಕ್ಷಣ ಭದ್ರತಾ ಸಿಬ್ಬಂದಿಗೆ ವಿಷಯ ಮುಟ್ಟಿಸಿದರು. ಆತನನ್ನು ಬಂಧಿಸಲಾಯಿತು ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ.
ಜೈಲು ಅಧಿಕಾರಿಗಳು ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕಾನೂನು ಕ್ರಮ ಆರಂಭಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ಭಾರತೀಯ ದಂಡಸಂಹಿತೆಯ ಸೂಕ್ತ ಸೆಕ್ಷನ್ಗಳ ಅನ್ವಯ ಹರ್ಷ ವಿಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಭವಿಷ್ಯದಲ್ಲಿ ಇಂಥ ಯಾವುದೇ ಘಟನೆಗಳು ನಡೆಯದಂತೆ ತಡೆಯಲು ಬರಾಕ್ಗಳ ಸುತ್ತ ಭದ್ರತಾ ವ್ಯವಸ್ಥೆ ಬಿಗಿಗೊಳಿಸಲಾಗಿದೆ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ. ಆರೋಪಿ ಈ ಮುನ್ನ ಅತ್ಯಾಚಾರ ಪ್ರಕರಣವೊಂದರ ಸಂಬಂಧ ಜೈಲು ಸೇರಿದ್ದ.