ಬಿಹಾರದ ಫರೀದಾಬಾದ್ನಲ್ಲೊಬ್ಬಳು 'ಬಿ.ಟೆಕ್ ಚಾಯ್ವಾಲಿ': ವೀಡಿಯೋ ವೈರಲ್
Photo: Instagram
ಪಾಟ್ನಾ: ಬಿಹಾರದ ಫರೀದಾಬಾದ್ನಲ್ಲಿ ಟೀ ಸ್ಟಾಲ್ ಆರಂಭಿಸುವ ಮೂಲಕ ಬಿ.ಟೆಕ್ ವಿದ್ಯಾರ್ಥಿನಿಯೊಬ್ಬರು ಎಲ್ಲರ ಗಮನ ಸೆಳೆದಿದ್ದಾರೆ. ವರ್ತಿಕಾ ಸಿಂಗ್ ಎಂಬ ಈ ಯುವತಿಗೆ ತನ್ನದೇ ಆದ ಉದ್ಯಮ ನಡೆಸುವುದು ಬಹು ದಿನಗಳ ಕನಸಾಗಿತ್ತು. ಆದರೆ ಆಕೆ ತನ್ನ ಈ ಕನಸನ್ನು ಈಡೇರಿಸಲು ತನ್ನ ಪದವಿ ಶಿಕ್ಷಣಕ್ಕೆ ಅಗತ್ಯವಿರುವ ನಾಲ್ಕು ವರ್ಷ ಕಾಯಲು ಸಿದ್ಧಳಿರಲಿಲ್ಲ. ಶಿಕ್ಷಣ ಮುಂದುವರಿಸುತ್ತಿರುವಾಗಲೇ ಆಕೆ ತನ್ನ ಟೀ ಸ್ಟಾಲ್ ಆರಂಭಿಸಿ ಅದಕ್ಕೆ 'ಬಿ.ಟೆಕ್ ಚಾಯ್ವಾಲಿ' ಎಂಬ ಹೆಸರನಿಟ್ಟಿದ್ದಾರೆ.
ಸ್ವಾಗ್ ಸೇ ಡಾಕ್ಟರ್ ಎಂಬವರು ಇನ್ಸ್ಟಾಗ್ರಾಂನಲ್ಲಿ ಹಾಕಿರುವ ವೀಡಿಯೋ ಭಾರೀ ವೈರಲ್ ಆಗಿದೆ. ಅದರಲ್ಲಿ ವರ್ತಿಕಾ ತನ್ನ ಟೀ ಸ್ಟಾಲ್ ಬಗ್ಗೆ ಮಾತನಾಡಿದ್ದಾರೆ. ಫರಿದಾಬಾದ್ನ ಗ್ರೀನ್ ಫೀಲ್ಡ್ ಸಮೀಪ ಆಕೆಯ ಈ ಸ್ಟಾಲ್ ಇದ್ದು ಪ್ರತಿ ದಿನ ಸಂಜೆ 5.30 ರಿಂದ 9 ಗಂಟೆಗೆ ಇದು ಕಾರ್ಯಾಚರಿಸುತ್ತದೆ ಎಂದು ವೀಡಿಯೋದಲ್ಲಿ ಆಕೆ ಮಾಹಿತಿ ನೀಡಿದ್ದಾರೆ
ಆಕೆ ಹಲವು ವಿಧದ ಚಹಾ ಮಾರಾಟ ಮಾಡುತ್ತಾರೆ. ಮಸಾಲ ಚಾಯ್, ಲೆಮನ್ ಚಾಯ್ ಹೀಗೆ ಹಲವು ವಿಧದ ಚಹಾ ಲಭ್ಯವಿದ್ದು ಬೆಲೆ ರೂ 20 ಆಗಿದೆ. ಸಾದಾ ಚಹಾಗೆ ರೂ 10 ಆಗಿದೆ. ವೀಡಿಯೋದಲ್ಲಿ ಆಕೆ ಸಣ್ಣ ಸ್ಟೌ ಎದುರು ಚಹಾ ತಯಾರಿಸುತ್ತಿರುವುದು ಹಾಗೂ ಚಹಾ ಸೇವಿಸಲು ಜನರು ಅಲ್ಲಿ ಸೇರಿರುವುದು ಕಾಣಿಸುತ್ತದೆ.
ಈಗಾಗಲೇ 56,000ಕ್ಕೂ ಅಧಿಕ ಮಂದಿ ಈ ವೀಡಿಯೋ ವೀಕ್ಷಿಸಿದ್ದಾರೆ ಹಾಗೂ ಆಕೆಯ ಕಾರ್ಯ ಮತ್ತು ಆತ್ಮವಿಶ್ವಾಸವನ್ನು ಮೆಚ್ಚಿದ್ದಾರೆ.
ಈ ಹಿಂದೆ ಪಾಟ್ನಾದಲ್ಲಿ ಅರ್ಥಶಾಸ್ತ್ರ ಪದವೀಧರೆಯೊಬ್ಬರು ಎರಡು ವರ್ಷ ಉದ್ಯೋಗ ದೊರೆಯದೆ ಟೀ ಸ್ಟಾಲ್ ನಿರ್ಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಪ್ರಿಯಾಂಕ ಗುಪ್ತಾ ಎಂಬ ಈ ಯುವತಿ ತಾನು ಎಂಬಿಎ ಚಾಯ್ವಾಲ ಎಂದು ಖ್ಯಾತಿ ಪಡೆದ ಪ್ರಫುಲ್ ಬಿಲ್ಲೊರ್ನಿಂದ ಸ್ಫೂರ್ತಿ ಪಡೆದಿದ್ದಾಗಿ ಹೇಳಿಕೊಂಡಿದ್ದರು.