ಪ್ರೇಮ ವಿವಾಹವಾದ ಪುತ್ರಿಯನ್ನು ಪೊಲೀಸ್ ಠಾಣೆಯೆದುರಿನಲ್ಲೇ ಅಪಹರಿಸಿದ ಕುಟುಂಬಸ್ಥರು
Photo: NDTV Twitter
ಜೋಧಪುರ್: ತನ್ನ ಹೆತ್ತವರ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಿದ್ದ 19 ವರ್ಷದ ಯುವತಿಯನ್ನು ಆಕೆಯ ಸಂಬಂಧಿಕರು ಪೊಲೀಸರ ಕಣ್ಣೆದುರೇ ಕಾರಿನಲ್ಲಿ ಅಪಹರಿಸಿದ ಘಟನೆ ನಡೆದಿದ್ದು ಈ ಕುರಿತಾದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹುಡುಗಿ ಮನೆಯಿಂದ ಪರಾರಿಯಾಗಿ ವಿವಾಹವಾಗಿದ್ದಳು. ಈ ಸಂಬಂಧ ಆಕೆಯ ಹೆತ್ತವರು ಬಿಲಾಡ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಈ ಸಂಬಂಧ ಯುವತಿ ತನ್ನ ಗಂಡನೊಂದಿಗೆ ಠಾಣೆಯಲ್ಲಿ ಹೇಳಿಕೆ ನೀಡಲು ಹಾಗೂ ರಕ್ಷಣೆ ಕೋರಲು ಆಗಮಿಸಿದ್ದಳು.
ಈ ಸಂದರ್ಭ ಅಲ್ಲಿಗೆ ಕಾರೊಂದರಲ್ಲಿ ಆಗಮಿಸಿದ್ದ ಆಕೆಯ ಸಂಬಂಧಿಕರು ಎಲ್ಲರು ನೋಡುತ್ತಿದ್ದಂತೆಯೇ ಆಕೆಯನ್ನು ಕಾರಿನೊಳಗೆ ಹಾಕಿ ಕರೆದೊಯ್ದಿದ್ದಾರೆ. ಆಕೆಯ ಗಂಡ ಹಾಗೂ ಪೊಲೀಸರು ಕಾರಿನ ಹಿಂದೆ ಓಡುವ ವಿಫಲ ಯತ್ನ ನಡೆಸಿದ್ದಾರೆ.
ಘಟನೆಯ ಮೂರು ಗಂಟೆಗಳ ನಂತರ ಯುವತಿಯನ್ನು ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈಗ ಯುವತಿ ತನ್ನ ಪತಿಯ ಜೊತೆಗಿದ್ದಾಳೆ ಎಂದೂ ಪೊಲೀಸರು ತಿಳಿಸಿದ್ದಾರೆ.
ಅಪಹರಣ ಘಟನೆಗೆ ಸಂಬಂಧಿಸಿದಂತೆ ಆಕೆಯ ಐದು ಮಂದಿ ಕುಟುಂಬ ಸದಸ್ಯರನ್ನು ಬಂಧಿಸಲಾಗಿದೆ ಹಾಗೂ ಐಪಿಸಿ ಸೆಕ್ಷನ್ 364 ಅನ್ವಯ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.