ಪಶ್ಚಿಮ ಬಂಗಾಳ ಬಿಜೆಪಿ ಮುಖಂಡ ಲೋಕೇನಾಥ್ ಚಟರ್ಜಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಪ್ರಕರಣ ದಾಖಲು
ಕೊಲ್ಕತ್ತಾ: ಪಶ್ಚಿಮ ಬಂಗಾಳ ಬಿಜೆಪಿ ಯುವಮೋರ್ಚಾ ಮುಖಂಡರೊಬ್ಬರು ತಮ್ಮ ಪಕ್ಷದ ಸಹೋದ್ಯೋಗಿ ಲೋಕೇನಾಥ್ ಚಟರ್ಜಿ (Lokenath Chatterjee) ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಜತೆಗೆ ಆರೋಪಿ ಮುಖಂಡನ ಅಂಗರಕ್ಷಕರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾಗಿಯೂ ದೂರಿದ್ದಾರೆ. ಲೋಕೇನಾಥ್ ಚಟರ್ಜಿ ರಾಜ್ಯ ಬಿಜೆಪಿ ಕಾನೂನು ಘಟಕದ ಉಸ್ತುವಾರಿ ಹೊಣೆ ಹೊಂದಿದ್ದಾರೆ ಎಂದು ndtv.com ವರದಿ ಮಾಡಿದೆ.
ಪಕ್ಷದ ಕೆಲಸಕ್ಕಾಗಿ ಪಕ್ಕದ ಸಿಕ್ಕಿಂಗೆ ಲೋಕೇನಾಥ್ ಚಟರ್ಜಿ ಜತೆ ತೆರಳುವಂತೆ ಸೂಚಿಸಲಾಗಿತ್ತು. ಈ ವೇಳೆ ಲೋಕೇನಾಥ್ ಚಟರ್ಜಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆಪಾದಿಸಿದ್ದಾರೆ. ದೂರು ನೀಡಿದ ಮುಖಂಡ, ಲೋಕೇನಾಥ್ ಚಟರ್ಜಿ ಜತೆಗೆ ಪ್ರವಾಸ ಹೋಗಿದ್ದ ವೇಳೆ ಅಂದರೆ ಅಕ್ಟೋಬರ್ 27 ಮತ್ತು 29ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ.
"ಬಿಡುವು ಇದ್ದರೆ 25ಕ್ಕೆ ತೆರಳೋಣ ಎಂದು ಅವರು ಹೇಳಿದಾಗ, ಆಗಬಹುದು. ಪಕ್ಷದ ಕೆಲಸ ಮುಗಿಸಿ ವಾಪಾಸ್ಸಾಗುತ್ತೇನೆ ಎಂದು ಹೇಳಿದೆ. ಸಹೋದರನ ಜತೆ ಸಿಕ್ಕಿಂಗೆ ಹೋಗಿ ಬರುವುದಾಗಿ ತಾಯಿಗೆ ಹೇಳಿ ಹೊರಟೆ. ನಾನು ನಿಲ್ದಾಣ ತಲುಪಿದಾಗ ಅವರ ಇಡೀ ಕುಟುಂಬದವರಿಗೆ ಎಸಿ ಕೋಚ್ ಕಾಯ್ದಿರಿಸಲಾಗಿತ್ತು ಹಾಗೂ ನನಗೆ ನಾನ್-ಎಸಿ ಕೋಚ್ ಬುಕ್ ಮಾಡಲಾಗಿತ್ತು" ಎಂದು ವಿವರಿಸಿದ್ದಾರೆ.
ನನ್ನನ್ನು ಈ ರೀತಿ ನಡೆಸಿಕೊಂಡಿದ್ದನ್ನು ಪ್ರಶ್ನಿಸಿದ್ದಕ್ಕೆ ಅವರ ಸಿಐಎಸ್ಎಫ್ ಅಂಗರಕ್ಷಕರು ನನ್ನ ಕಾಲರ್ ಹಿಡಿದು ಹಲ್ಲೆ ನಡೆಸಿದರು. "ನಿನ್ನನ್ನು ಹಿಡಿದುಕೊಂಡು ಬರಲು ಸರ್ ಹೇಳಿದ್ದಾರೆ ಎಂದು ಹೇಳಿದ ಅಂರಕ್ಷಕರು ಬಲವಂತವಾಗಿ ಕಾರಿನಲ್ಲಿ ಕೂರಿಸಿ ನನ್ನ ಫೋನ್ ಮತ್ತು ಬ್ಯಾಗ್ ಕಿತ್ತುಕೊಂಡರು. ಕೊನೆಗೆ ಸಿಕ್ಕಿಂ ತಲುಪಿದಾಗ ಪಕ್ಷದ ಯಾವ ಕೆಲಸವೂ ಇಲ್ಲ; ಲೈಂಗಿಕ ಬಲವಂತಕ್ಕಾಗಿ ಕರೆ ತರಲಾಗಿದೆ ಎನ್ನುವುದು ತಿಳಿಯಿತು" ಎಂದು ವಿವರಿಸಿದ್ದಾರೆ.
ಭದ್ರತಾ ಸಿಬ್ಬಂದಿ ಹೇಗೆ ತಮ್ಮನ್ನು ಲೈಂಗಿಕ ಕೃತ್ಯಕ್ಕೆ ಬಲವಂತವಾಗಿ ತಳ್ಳಿದರು ಎನ್ನುವುದನ್ನು ದೂರಿನಲ್ಲಿ ವಿವರಿಸಲಾಗಿದೆ. ಲೋಕೇನಾಥ್ ಚಟರ್ಜಿಯ ಕೊಠಡಿಯಲ್ಲಿ ಬಲವಂತವಾಗಿ ಕೂಡಿಹಾಕಿ ಬಟ್ಟೆ ಕಳಚಿಸಿ ಬಂದೂರು ತೋರಿಸಿ ಲೈಂಗಿಕ ಹಲ್ಲೆ ನಡೆಸಲಾಗಿದೆ ಎಂದು ಆಪಾದಿಸಲಾಗಿದ್ದು, ಪ್ರಕರಣ ದಾಖಲಾಗಿದೆ. ಈ ಬಗ್ಗೆ ndtv.com ವರದಿ ಮಾಡಿದೆ.