ಮದುವೆಯಾಗಬೇಕಿದ್ದರೆ ಕೆಲಸಕ್ಕೆ ಸೇರಬೇಕೆಂದು ಷರತ್ತು ವಿಧಿಸಿದ ತಾಯಿಯನ್ನು ಹತ್ಯೆಗೈದ ನಿರುದ್ಯೋಗಿ ಪುತ್ರ
ಭೋಪಾಲ್: 32 ವರ್ಷದ ನಿರುದ್ಯೋಗಿಯೊಬ್ಬ ತನ್ನ ಮದುವೆಗೆ ಒಪ್ಪಿಗೆ ನೀಡದ ತನ್ನ 67 ವರ್ಷದ ತಾಯಿಯನ್ನು ಕೊಂದಿದ್ದಾನೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಮದುವೆಯಾಗಬೇಕಿದ್ದರೆ, ಮೊದಲು ಉದ್ಯೋಗ ಹಿಡಿಯುವಂತೆ ತಾಯಿ ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಮೃತ ಅಸ್ಮಾ ಫಾರೂಖ್ ತನ್ನ ಇಬ್ಬರು ಮಕ್ಕಳಾದ ಅತಾಹುಲ್ಲಾ ಹಾಗೂ ಫರ್ಹಾನ್ ರೊಂದಿಗೆ ವಾಸಿಸುತ್ತಿದ್ದರು. ಮಂಗಳವಾರ ಅತಾಹುಲ್ಲಾ ತನ್ನ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಆಸ್ಪತ್ರೆಗೆ ಸಾಗಿಸಿದ್ದು, ಆದರೆ ಆಸ್ಪತ್ರೆಗೆ ತಲುಪುವ ಮುನ್ನವೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಫರ್ಹಾನ್ ರಕ್ತದ ಕಲೆಗಳಿರುವ ಕ್ರಿಕೆಟ್ ಬ್ಯಾಟ್ ಅನ್ನು ಮರೆಮಾಚಿರುವುದನ್ನು ಮಾರನೆ ದಿನ ಅತಾಹುಲ್ಲಾ ಕಂಡು ಕೊಂಡಿದ್ದು, ಈ ಬಗ್ಗೆ ಪ್ರಶ್ನಿಸಿದ್ದಾರೆ. ಮೊದಲು ತಾಯಿ ಮಹಡಿಯಿಂದ ಬಿದ್ದು ಮೃತಪಟ್ಟಿರುವುದಾಗಿ ಫರ್ಹಾನ್ ನಂಬಿಸಿದ್ದರೂ, ನಂತರ ತಾಯಿಯನ್ನು ಬ್ಯಾಟ್ನಿಂದ ಹೊಡೆದು ಸಾಯಿಸಿರುವುದನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೆ, ಪೊಲೀಸರಿಗೆ ಮಾಹಿತಿ ನೀಡಲು ಮುಂದಾದರೆ ಕೊಲೆ ಮಾಡುವುದಾಗಿ ಅತಾಹುಲ್ಲಾಗೆ ಫರ್ಹಾನ್ ಬೆದರಿಕೆ ಹಾಕಿದ್ದಾನೆ ಎಂದೂ ವರದಿಯಾಗಿದೆ. ಪೊಲೀಸರು ಫರ್ಹಾನ್ನನ್ನು ಬಂಧಿಸಿದ್ದು, ಆತ ಬ್ಯಾಟ್ನಿಂದ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.