40-45 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ: ಹಿಮಾಚಲದ ಕಾಂಗ್ರೆಸ್ ಮುಖ್ಯಸ್ಥೆ ಪ್ರತಿಭಾ ಸಿಂಗ್
ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಶನಿವಾರ ಬೆಳಗ್ಗೆ ಆರಂಭವಾಗಿದ್ದು ಹಿಮಾಚಲ ಪ್ರದೇಶದ ಕಾಂಗ್ರೆಸ್ ಮುಖ್ಯಸ್ಥೆ ಪ್ರತಿಭಾ ಸಿಂಗ್ ಅವರು ತಮ್ಮ ಪುತ್ರ, ಪಕ್ಷದ ಶಾಸಕ ವಿಕ್ರಮಾದಿತ್ಯ ಸಿಂಗ್ ಅವರೊಂದಿಗೆ ಶಿಮ್ಲಾದಲ್ಲಿ ಮತ ಚಲಾಯಿಸಿದರು.
ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಪಕ್ಷ ಯಾವಾಗಲೂ ಅಭಿವೃದ್ಧಿಗಾಗಿ ಕೆಲಸ ಮಾಡಿದೆ ಹಾಗೂ 40-45 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.
"ಅಭಿವೃದ್ಧಿ ಹಾಗೂ ಕೆಲಸಕ್ಕಾಗಿ ಮತ ಚಲಾಯಿಸುವಂತೆ ಹಿಮಾಚಲ ಪ್ರದೇಶದ ಜನರಿಗೆ ಹೇಳಲು ನಾವು ಬಯಸುತ್ತೇವೆ. ಕಾಂಗ್ರೆಸ್ ಯಾವಾಗಲೂ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ ಹಾಗೂ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮಾತ್ರ ಆ ಕೆಲಸವನ್ನು ರಾಜ್ಯದಲ್ಲಿ ಕೊಂಡೊಯ್ಯುತ್ತದೆ. 40-45 ಸ್ಥಾನ ಗೆಲ್ಲುವ ವಿಶ್ವಾಸವಿದೆ'' ಎಂದು ಪ್ರತಿಭಾ ಹೇಳಿದರು.
"ಕಳೆದ ವರ್ಷ ನಿಧನರಾದ ವೀರಭದ್ರ ಸಿಂಗ್ ಅವರ ಅನುಪಸ್ಥಿತಿಯಲ್ಲಿ ಎದುರಿಸಿದ ಕಷ್ಟಗಳ ನಡುವೆಯೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಮತದಾರರು ಮನಸ್ಸು ಮಾಡಿದ್ದಾರೆ.ಕಾಂಗ್ರೆಸ್ಗೆ ಅವಕಾಶ ನೀಡಲಿದ್ದಾರೆ. ಏಕೆಂದರೆ ಪಕ್ಷವು ಯಾವಾಗಲೂ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಿದೆ'' ಎಂದು ಪ್ರತಿಭಾ ಹೇಳಿದರು.
"ಹಿಮಾಚಲ ಪ್ರದೇಶದ ಹಲವು ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿಯಾಗಲು ಬಯಸುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಆಗುವ ಆಸೆ ನನಗಿಲ್ಲ . ಮುಖ್ಯಮಂತ್ರಿ ಯಾರಾಗಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಹಾಗೂ ಶಾಸಕರು ನಿರ್ಧರಿಸುತ್ತಾರೆ'' ಎಂದು ಸಿಂಗ್ ಹೇಳಿದರು.
Himachal Pradesh Congress chief Pratibha Singh and her son & party MLA Vikramaditya Singh cast their votes for #HimachalPradeshElections, in Rampur, Shimla. pic.twitter.com/ptIsIXlRRw
— ANI (@ANI) November 12, 2022