"ಸುಪ್ರೀಂನ ಎಲ್ಲ ಪೀಠಗಳಿಂದ ಪ್ರತಿದಿನ 10 ವೈವಾಹಿಕ ವರ್ಗಾವಣೆ ಪ್ರಕರಣಗಳು, 10 ಜಾಮೀನು ಅರ್ಜಿಗಳ ವಿಚಾರಣೆ"
ಸಿಜೆಐ ಡಿ.ವೈ.ಚಂದ್ರಚೂಡ್
ಹೊಸದಿಲ್ಲಿ, ನ.18: ಪ್ರಕರಣಗಳು ಬಾಕಿಯಾಗುವುದನ್ನು ಕಡಿಮೆಗೊಳಿಸುವ ಪ್ರಯತ್ನವಾಗಿ ಸುಪ್ರೀಂ ಕೋರ್ಟ್ನ ಎಲ್ಲ 13 ಪೀಠಗಳು ಪ್ರತಿ ದಿನ ತಲಾ 10 ವೈವಾಹಿಕ ವಿವಾದಗಳಿಗೆ ಸಂಬಂಧಿಸಿದ ವರ್ಗಾವಣೆ ಅರ್ಜಿಗಳು ಮತ್ತು ಅಷ್ಟೇ ಸಂಖ್ಯೆಯ ಜಾಮೀನು ಅರ್ಜಿಗಳ ವಿಚಾರಣೆ ನಡೆಸಲಿವೆ ಎಂದು ಭಾರತದ ಮುಖ್ಯ ನ್ಯಾಯಾಧೀಶ ಡಿ.ವೈ.ಚಂದ್ರಚೂಡ್ ಅವರು ಶುಕ್ರವಾರ ಪ್ರಕಟಿಸಿದರು.
ಸರ್ವೋಚ್ಚ ನ್ಯಾಯಾಲಯದ ಎಲ್ಲ ನ್ಯಾಯಾಧೀಶರ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಚಳಿಗಾಲದ ರಜೆಗೆ ಮುನ್ನ ಇಂತಹ ಎಲ್ಲ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗುವುದು ಎಂದು ಕಲಾಪಗಳ ಆರಂಭದಲ್ಲಿ ನ್ಯಾ.ಚಂದ್ರಚೂಡ್ ತಿಳಿಸಿದರು.
ಪ್ರಸಕ್ತ ಕಕ್ಷಿದಾರರು ತಮ್ಮ ಇಷ್ಟದ ಸ್ಥಳಗಳಿಗೆ ಪ್ರಕರಣಗಳ ವರ್ಗಾವಣೆಯನ್ನು ಬಯಸಿರುವ ವೈವಾಹಿಕ ವಿವಾದಗಳಿಗೆ ಸಂಬಂಧಿಸಿದ 3,000 ಅರ್ಜಿಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿಯಿವೆ ಎಂದು ತಿಳಿಸಿದ ನ್ಯಾ.ಚಂದ್ರಚೂಡ್ ನೇತೃತ್ವದ ಪೀಠವು,ಪ್ರತಿ ಪೀಠವು ಪ್ರತಿ ದಿನ 10 ವರ್ಗಾವಣೆ ಪ್ರಕರಣಗಳನ್ನು ಕೈಗೆತ್ತಿಕೊಂಡರೆ ಎಲ್ಲ 13 ಪೀಠಗಳು ದಿನಕ್ಕೆ 130 ಮತ್ತು ವಾರಕ್ಕೆ 650 ಪ್ರಕರಣಗಳನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ಹೀಗಾಗಿ ಚಳಿಗಾಲದ ರಜೆಗಳಿಗೆ ಮುನ್ನ ಐದು ವಾರಗಳ ಅಂತ್ಯದಲ್ಲಿ ಎಲ್ಲ ವರ್ಗಾವಣೆ ಅರ್ಜಿಗಳು ಇತ್ಯರ್ಥಗೊಳ್ಳುತ್ತವೆ ಎಂದು ಹೇಳಿತು.
ಪೀಠಗಳು ಪ್ರತಿ ದಿನ ಜಾಮೀನು ಮತ್ತು ವರ್ಗಾವಣೆಯ 20 ಅರ್ಜಿಗಳನ್ನು ನಿರ್ವಹಿಸಿದ ಬಳಿಕ ಇತರ ಪ್ರಕರಣಗಳನ್ನು ಕೈಗೆತ್ತಿಕೊಳ್ಳುತ್ತವೆ ಎಂದು ತಿಳಿಸಿದ ನ್ಯಾ.ಚಂದ್ರಚೂಡ್ ಅವರು,ತಡರಾತ್ರಿಯವರೆಗೂ ಪ್ರಕರಣಗಳ ಪರಿಶೀಲನೆಯ ಅನಿವಾರ್ಯತೆಯನ್ನು ಎದುರಿಸುತ್ತಿರುವ ನ್ಯಾಯಾಧೀಶರ ಮೇಲಿನ ಹೊರೆಯನ್ನು ತಗ್ಗಿಸಲು ಪೂರಕ ಪಟ್ಟಿಯಲ್ಲಿ ಕೊನೆಯ ಘಳಿಗೆಯಲ್ಲಿ ಸೇರಿಸಲಾಗುವ ಪ್ರಕರಣಗಳ ಸಂಖ್ಯೆಯನ್ನು ಕಡಿತಗೊಳಿಸಲು ತಾನು ನಿರ್ಧರಿಸಿದ್ದೇನೆ ಎಂದು ಹೇಳಿದರು.