ಉತ್ತರಪ್ರದೇಶ: ಮಲ ಮಗಳನ್ನು ಪೆಟ್ಟಿಗೆಯಲ್ಲಿ ಇರಿಸಿ ಬೀಗ ಹಾಕಿದ ಮಹಿಳೆ !
ಮುಝಾಫರ್ ನಗರ್: ಗರ್ಭಿಣಿಯೋರ್ವರು ತನ್ನ ಒಂಬತ್ತು ವರ್ಷದ ಮಲ ಮಗಳನ್ನು ಪೆಟ್ಟಿಗೆಯಲ್ಲಿರಿಸಿ ಬೀಗ ಹಾಕಿದ ಆಘಾತಕಾರಿ ಘಟನೆ ಉತ್ತರಪ್ರದೇಶದ ಮುಝಫ್ಫರ್ ನಗರ(Muzaffar City)ದಲ್ಲಿ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಆರೋಪಿ ಶಿಲ್ಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಹತ್ಯೆ ಯತ್ನ)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಗರ್ಭಿಣಿ. ಆದುದರಿಂದ ಇದುವರೆಗೆ ಬಂಧಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
9 ವರ್ಷದ ಬಾಲಕಿ ರಾಧಿಕಾ ಸೋಮವಾರ ಸಂಜೆ ನಾಪತ್ತೆಯಾಗಿದ್ದಳು. ಪೊಲೀಸರು ಮನೆಗೆ ತೆರಳಿದಾಗ ಬಾಲಕಿ ಬೀಗ ಹಾಕಿದ ಪೆಟ್ಟಿಗೆಯಲ್ಲಿ ಪ್ರಜ್ಞಾ ರಹಿತಳಾಗಿ ಇರುವುದು ಪತ್ತೆಯಾಯಿತು ಎಂದು ಪೊಲೀಸ್ ಉಪ ಅಧೀಕ್ಷಕ ಆಯುಷ್ ವಿಕ್ರಮ್ ಸಿಂಗ್ ಅವರು ಹೇಳಿದ್ದಾರೆ.
ಮಲ ತಾಯಿ ತನ್ನನ್ನು ಪೆಟ್ಟಿಗೆಯ ಒಳಗೆ ಇರಿಸಿ ಬೀಗ ಹಾಕಿದ್ದರು ಎಂದು ಬಾಲಕಿ ಅನಂತರ ಪೊಲೀಸರಿಗೆ ತಿಳಿಸಿದಳು ಎಂದು ಪೊಲೀಸ್ ಉಪ ಅಧೀಕ್ಷಕರು ತಿಳಿಸಿದ್ದಾರೆ.
ಬಾಲಕಿಯ ತಂದೆ ಸೋನು ಶರ್ಮಾ (Sonu Sharma)ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡಿದ ಬಳಿಕ ಶಿಲ್ಪಿಯನ್ನು ವಿವಾಹವಾಗಿದ್ದರು. ರಾಧಿಕಾ(Radhika) ಅವರೊಂದಿಗೆ ವಾಸಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.