ಇಲೆಕ್ಟೋರಲ್ ಬಾಂಡ್ಗಳ ಮಾರಾಟ ಅವಧಿ ಕುರಿತ ನಿಯಮಗಳನ್ನು ಕೇಂದ್ರ ಉಲ್ಲಂಘಿಸಿರುವುದು RTI ವಿವರದಿಂದ ಬಹಿರಂಗ: ವರದಿ
ಹೊಸದಿಲ್ಲಿ: ಇಲೆಕ್ಟೋರಲ್ ಬಾಂಡ್ ಯೋಜನೆ 2018ರ ನಿಯಮಗಳಿಗೆ ವಿರುದ್ಧವಾಗಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರವು 2018 ರಲ್ಲಿ ಇಲೆಕ್ಟೋರಲ್ ಬಾಂಡ್ಗಳ ಮಾರಾಟಕ್ಕೆ ಮೂರು ಅವಧಿಗಳನ್ನು ತೆರೆದಿತ್ತು ಎಂದು ಮಾಹಿತಿ ಹಕ್ಕು ಕಾಯಿದೆಯಡಿ (RTI) ದೊರೆತ ವಿವರಗಳಿಂದ ತಿಳಿದು ಬಂದಿದೆ. ಆ ನಿರ್ದಿಷ್ಟ ವರ್ಷದಲ್ಲಿ ಎಂಟು ರಾಜ್ಯಗಳ ವಿಧಾನಸಭೆಗಳಿಗೆ ಮುಂಚಿತವಾಗಿ ಹಾಗೂ ನಂತರ ಮೂರು ಅವಧಿಗಳಿಗೆ ಇಲೆಕ್ಟೋರಲ್ ಬಾಂಡ್ಗಳ ಮಾರಾಟಕ್ಕೆ ಅನುಮತಿಸಲಾಗಿತ್ತು ಎಂದು RTI ಉತ್ತರದಿಂದ ತಿಳಿದು ಬಂದಿದೆ ಎಂದು newslaundry.com ವರದಿ ಮಾಡಿದೆ.
RTI ಕಾರ್ಯಕರ್ತ ನಿವೃತ್ತ ಕೊಮ್ಮೊಡೋರ್ ಲೋಕೇಶ್ ಬಾತ್ರ ಅವರಿಗೆ RTI ಉತ್ತರದ ರೂಪದಲ್ಲಿ ದೊರೆತ ವಿತ್ತ ಸಚಿವಾಲಯದ ಮಾಹಿತಿ ಪ್ರಕಾರ 2018 ರಲ್ಲಿ ಮಾರ್ಚ್ ಮೇ ಮತ್ತು ನವೆಂಬರ್ ಹಾಗೂ ಎಪ್ರಿಲ್, ಜುಲೈ ಮತ್ತು ಅಕ್ಟೋಬರ್ ನಲ್ಲಿ ಇಲೆಕ್ಟೋರಲ್ ಬಾಂಡ್ಗಳ ಮಾರಾಟಕ್ಕೆ ಅನುಮತಿ ಕಲ್ಪಿಸಲಾಗಿತ್ತು.
ಆದರೆ ಇಲೆಕ್ಟೋರಲ್ ಬಾಂಡ್ ಯೋಜನೆಯ ಪ್ರಕಾರ ಇಲೆಕ್ಟೋರಲ್ ಬಾಂಡ್ಗಳನ್ನು ಲೋಕಸಭಾ ಚುನಾವಣೆ ನಡೆಯದ ವರ್ಷದಲ್ಲಿ ಜನವರಿ, ಎಪ್ರಿಲ್, ಜುಲೈ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಮಾರಾಟ ಮಾಡಬಹುದಾಗಿದೆ.
ಆದರೆ ಕೇಂದ್ರ ಸರ್ಕಾರ 2018 ರಲ್ಲಿ ಮಾರ್ಚ್ 1 ಮತ್ತು 10, ಮೇ 1 ಮತ್ತು 10 ಹಾಗೂ ನವೆಂಬರ್ 1 ಮತ್ತು 10 ನಡುವೆ ಮಾರಾಟಕ್ಕೆ ಅನುಮತಿಸಿತ್ತು. ಆದರೆ ಅದೇ ವರ್ಷದ ಫೆಬ್ರವರಿಯಲ್ಲಿ ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರಾದಲ್ಲಿ ಚುನಾವಣೆಗಳು ನಡೆದಿದ್ದವು.
ದೊರೆತ ವಿವರಗಳ ಪ್ರಕಾರ ಕರ್ನಾಟಕದಲ್ಲಿನ ಚುನಾವಣೆಗಳ ಕಾರಣ ಮೇ ತಿಂಗಳಲ್ಲಿ ಬಾಂಡ್ಗಳ ಮಾರಾಟಕ್ಕೆ ಅನುಮತಿಸಲಾಗಿದ್ದರೆ ಛತ್ತೀಸಗಢ, ಮಧ್ಯಪ್ರದೇಶ, ಮಿಝೋರಾಂ, ರಾಜಸ್ಥಾನ ಮತ್ತು ತೆಲಂಗಾಣ ಚುನಾವಣೆಗಳ ಹಿನ್ನೆಲೆಯಲ್ಲಿ ನವೆಂಬರ್ ತಿಂಗಳಿನಲ್ಲಿ ಬಾಂಡ್ಗಳ ಮಾರಾಟಕ್ಕೆ ಅನುಮತಿಸಲಾಗಿತ್ತು.
ಇಲೆಕ್ಟೋರಲ್ ಬಾಂಡ್ ಯೋಜನೆ 2018 ಅನ್ವಯ ಬಾಂಡ್ಗಳನ್ನು ಕೇಂದ್ರ ಸರ್ಕಾರ ನಿರ್ಧರಿಸಿದಂತೆ ಜನವರಿ, ಎಪ್ರಿಲ್, ಜುಲೈ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ತಲಾ ಹತ್ತು ದಿನಗಳ ಕಾಲ ಮಾರಾಟಕ್ಕೆ ಅನುಮತಿಸಬಹುದಾಗಿದೆ. ಅಷ್ಟೇ ಅಲ್ಲದೆ ಸಾರ್ವತ್ರಿಕ ಚುನಾವಣೆಯ ವರ್ಷದಲ್ಲಿ ಕೇಂದ್ರ ಸರ್ಕಾರ ನಿರ್ದಿಷ್ಟ ಪಡಿಸಿದ ಹೆಚ್ಚುವರಿ 30 ದಿನಗಳ ಕಾಲ ಮಾರಾಟ ಮಾಡಬಹುದಾಗಿದೆ.
ಸಾರ್ವತ್ರಿಕ ಚುನಾವಣೆ ಎಪ್ರಿಲ್, ಮೇ 2019 ರಲ್ಲಿ ನಡೆದಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.