ಭಾರತದಲ್ಲಿ ಸಮುದಾಯ ಮಟ್ಟದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿ: ಸಿಸಿಎಂಬಿ ವಿಜ್ಞಾನಿ

ಡೆಹ್ರಾಡೂನ್, ಡಿ. 25: ಕೊರೋನ ವೈರಸ್ಗೆ ಸಂಬಂಧಿಸಿ ಭಾರತೀಯರಲ್ಲಿ ಸಮುದಾಯ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿದೆ. ಆದುದರಿಂದ ಚೀನಾದಲ್ಲಿ ಈಗ ಆತಂಕಕ್ಕೆ ಕಾರಣವಾಗಿರುವ ಕೊರೋನ ವೈರಸ್ನ ಬಿಎಫ್. 7 ಉಪತಳಿಯ ಸೋಂಕು ಭಾರತದಲ್ಲಿ ಗಂಭೀರ ಸ್ವರೂಪದ್ದಾಗಿರುವುದಿಲ್ಲ ಎಂದು ಸಿಎಸ್ಐಆರ್ನ ಅಂಗ ಸಂಸ್ಥೆಯಾದ ಸಿಸಿಎಂಬಿ (ಸೆಂಟರ್ ಫಾರ್ ಸೆಲ್ಯುಲಾರ್ ಆ್ಯಂಡ್ ಮೊಲೆಕ್ಯುಲಾರ್ ಬಯಾಲಜಿ) ನಿರ್ದೇಶಕ ವಿನಯ್ ಕೆ. ನಂದಿಕೂರಿ ಅವರು ತಿಳಿಸಿದ್ದಾರೆ.
ಆದರೆ, ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸಿ ಎಂದು ಜನರಿಗೆ ಸಲಹೆ ನೀಡಿರುವ ಅವರು, ಕೋವಿಡ್ ವೈರಸ್ನ ಎಲ್ಲ ರೂಪಾಂತರಿ ಪ್ರಬೇಧಗಳು ವ್ಯಕ್ತಿಯ ದೇಹದಲ್ಲಿನ ರೋಗ ನಿರೋಧಕ ಶಕ್ತಿಯಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದರು.
ಅತ್ಯಧಿಕ ಹರಡುವ ಈ ರೂಪಾಂತರಿ ಲಸಿಕೆ ಪಡೆದು ಕೊಂಡವರು ಹಾಗೂ ಈ ಮೊದಲು ಒಮಿಕ್ರಾನ್ನ ಸೋಂಕಿಗೆ ಒಳಗಾದವರಲ್ಲೂ ಮತ್ತೊಮ್ಮೆ ಸೋಂಕು ಕಾಣಿಸಿಕೊಳ್ಳುವಂತೆ ಮಾಡುತ್ತದೆ. ಇದು ಆಂತಂಕಕಾರಿಯಾಗಿದೆ. ಆದುದರಿಂದ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದು ಅತ್ಯಗತ್ಯ ಎಂದು ಅವರು ಹೇಳಿದ್ದಾರೆ.
ನಾವು (ಭಾರತ) ಅತಿ ದೊಡ್ಡ ಡೆಲ್ಟಾ ಅಲೆಯನ್ನು ನೋಡಿದ್ದೇವೆ. ಅನಂತರ ಲಸಿಕೆ ತೆಗೆದುಕೊಂಡೆವು. ಬಳಿಕ ಒಮಿಕ್ರಾನ್ ಅಲೆ ಬಂತು. ನಾವು ಬೂಸ್ಟರ್ ಡೋಸ್ ಮುಂದುವರಿಸಿದೆವು. ನಾವು ಹಲವು ವಿಷಯಗಳಲ್ಲಿ ಭಿನ್ನರಾಗಿದ್ದೇವೆ. ಆದುದರಿಂದ ಚೀನಾದಲ್ಲಿ ಏನು ಸಂಭವಿಸಿದೆಯೋ ಅದು ಭಾರತದಲ್ಲಿ ಸಂಭವಿಸಲಾರದು ಎಂದು ನಂದಿಕೂರಿ ತಿಳಿಸಿದರು.







