ಬಾಳಸಂಗಾತಿ ಹೇಗಿರಬೇಕು ಎಂಬ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರಿಸಿದ್ದು ಹೀಗೆ..
ಹೊಸದಿಲ್ಲಿ: ಭಾರತ್ ಜೋಡೊ ಯಾತ್ರೆ ವೇಳೆ ಯೂಟ್ಯೂಬ್ ಚಾನಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ತಾಯಿ ಸೋನಿಯಾಗಾಂಧಿ ಹಾಗೂ ಅಜ್ಜಿ ಇಂದಿರಾಗಾಂಧಿಯ ಗುಣಗಳನ್ನು ಹೊಂದಿರುವ ಬಾಳಸಂಗಾತಿ ಜೊತೆ ಜೀವನ ನಡೆಸಲು ಬಯಸುವುದಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬಹಿರಂಗಪಡಿಸಿದ್ದಾರೆ.
ಮಾಜಿ ಪ್ರಧಾನಿ ಇಂದಿರಾಗಾಂಧಿಯವರನ್ನು "ನನ್ನ ಜೀವನದ ಪ್ರೀತಿ ಮತ್ತು ನನ್ನ ಎರಡನೇ ತಾಯಿ" ಎಂದು ಬಣ್ಣಿಸಿದ್ದಾರೆ.
ಅಂಥ ಮಹಿಳೆಯ ಜತೆ ಬಾಳ್ವೆ ನಡೆಸಲು ಬಯಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ, "ಕುತೂಹಲಕಾರಿ ಪ್ರಶ್ನೆ.. ನಾನು ಒಳ್ಳೆಯ ಗುಣಗಳನ್ನು ಹೊಂದಿರುವ ಮಹಿಳೆಯ ಜತೆ.. ತಾಯಿ ಹಾಗೂ ಅಜ್ಜಿಯ ಉತ್ತಮ ಗುಣಗಳನ್ನು ಹೊಂದಿದ ಮಹಿಳೆಯನ್ನು ಆರಿಸಿಕೊಳ್ಳುತ್ತೇನೆ" ಎಂದು ಉತ್ತರಿಸಿದರು.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಕೈಗೊಂಡಿರುವ ಮಾಜಿ ಕಾಂಗ್ರೆಸ್ ಅಧ್ಯಕ್ಷ, ತಮ್ಮ ಮೋಟರ್ಸೈಕಲ್ ಹಾಗೂ ಸೈಕಲ್ ಸವಾರಿ ಪ್ರೀತಿ ಬಗ್ಗೆಯೂ ಹೇಳಿಕೊಂಡಿದ್ದಾರೆ.
"ನಾನು ಎಲೆಕ್ಟ್ರಿಕ್ ಸ್ಕೂಟರ್ ಓಡಿಸಿದ್ದೇನೆ. ಎಲೆಕ್ಟ್ರಿಕ್ ಬೈಕ್ ಇನ್ನೂ ಓಡಿಸಿಲ್ಲ. ಈ ಚೀನಿ ಕಂಪನಿಯನ್ನು ನೀವು ನೋಡಿರಬಹುದು.. ಎಲೆಕ್ಟ್ರಿಕ್ ಮೋಟರ್ ಅಳವಡಿಸಿದ ಸೈಕಲ್ ಹಾಗೂ ಮೌಂಟೇನ್ ಬೈಕ್ಗಳು.. ತೀರಾ ಆಸಕ್ತಿದಾಯಕ ಪರಿಲ್ಪನೆ.. ಆದರೆ ಅವು ಉತ್ತಮವಾಗಿವೆ" ಎಂದು ಹೇಳಿದ್ದಾರೆ.
ಈ ಸಂದರ್ಶನವನ್ನು ರಾಹುಲ್, ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿದ್ದಾರೆ. ತಾವು ಯಾವುದೇ ಕಾರು ಹೊಂದಿಲ್ಲ. ತಾವು ಓಡಿಸುವ ಸಿಆರ್-ವಿ ತಾಯಿಯದ್ದು ಎಂದು ಸ್ಪಷ್ಟಪಡಿಸಿದ್ದಾರೆ. ಕಾರುಗಳ ಬಗ್ಗೆ ನನಗೆ ಆಸಕ್ತಿ ಇಲ್ಲ. ಮೋಟರ್ಬೈಕ್ ಓಡಿಸುವುದು ನನ್ನ ಆಸಕ್ತಿ ಎಂದಿದ್ದಾರೆ.